ಯಲಬುರ್ಗಾ: ಹತ್ತಿ ಬೆಳೆಯಲ್ಲಿ ಉತ್ಪಾದನೆ ಹಾಗೂ ಗುಣಮಟ್ಟ ಹೆಚ್ಚಿಸಲು ರೈತರು ನೂತನ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತೀರ್ಣ ನಿರ್ದೇಶಕ ಡಾ. ಜಯಪ್ರಕಾಶ ಮೋಹನ ನಿಡಗುಂದಿ ಹೇಳಿದರು.
ಪಟ್ಟಣದ ಕಂದಾಯ ಭವನದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಹತ್ತಿ ಬೆಳೆಯಲ್ಲಿ ನೂತನ ತಾಂತ್ರಿಕತೆಗಳ ಕುರಿತು ರೈತರಿಗೆ ತರಬೇತಿ ಕಾರ್ಯಗಾರ ಹಾಗೂ ಕೃಷಿ ಜಾಗೃತಿ ಅಭಿಯಾನದ “ಖೇತ್ ಬಚಾವೋ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹತ್ತಿ ಬೆಳೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದು, ಹವಾಮಾನ ವೈಪರೀತ್ಯ, ಕೀಟ-ರೋಗಗಳ ಬಾಧೆ ಹಾಗೂ ಉತ್ಪಾದನಾ ವೆಚ್ಚದ ಹೆಚ್ಚಳದಿಂದ ರೈತರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ, ಸಮತೋಲನ ಗೊಬ್ಬರ ಬಳಕೆ, ಹನಿ ನೀರಾವರಿ, ಮಣ್ಣು ಪರೀಕ್ಷೆ ಹಾಗೂ ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಕೃಷಿ ವಿಸ್ತೀರ್ಣ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಬದರಿ ಪ್ರಸಾದ ಮಾತನಾಡಿ, ರೈತರು ಕೃಷಿ ತಜ್ಞರ ಸಲಹೆಗಳನ್ನು ಪಾಲಿಸುವ ಮೂಲಕ ಬೆಳೆ ಹಾನಿಯನ್ನು ತಡೆಯಬಹುದು. ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕ, ಎಲೆಚುಕ್ಕೆ ಸೇರಿದಂತೆ ವಿವಿಧ ಕೀಟ-ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ರೈತರು ನಿಯಮಿತವಾಗಿ ತಮ್ಮ ಹೊಲಗಳ ಪರಿಶೀಲನೆ ನಡೆಸಿ, ಸಮಸ್ಯೆಗಳು ಕಂಡುಬಂದ ತಕ್ಷಣ ಕೃಷಿ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ರೈತರಿಗೆ ಹತ್ತಿ ಬೆಳೆಯ ಸುಧಾರಿತ ತಳಿಗಳು, ಬೆಳೆ ನಿರ್ವಹಣೆ, ನೀರು ಹಾಗೂ ಗೊಬ್ಬರದ ಸಮರ್ಪಕ ಬಳಕೆ, ಬೆಳೆ ಸಂರಕ್ಷಣಾ ಕ್ರಮಗಳ ಕುರಿತು ತಜ್ಞರು ವಿವರಿಸಿದರು.
ಆಡಳಿತ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ ಮಾತನಾಡಿ, ಕೃಷಿ ಇಲಾಖೆಯ ಇಂತಹ ಜಾಗೃತಿ ಕಾರ್ಯಕ್ರಮಗಳು ರೈತರಿಗೆ ಹೊಸ ತಂತ್ರಜ್ಞಾನಗಳ ಪರಿಚಯ ಮಾಡಿಕೊಡುವ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ, ರೈತ ಮುಖಂಡರು, ರೈತ ಮಹಿಳೆಯರು ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು. ರೈತರು ತಜ್ಞರೊಂದಿಗೆ ಸಂವಾದ ನಡೆಸಿ ತಮ್ಮ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.
