ಪತ್ರ ಬರೆಯುವ ಬದಲು ಅನ್ನದಾತರ ಪರವಾಗಿ ಹೋರಾಟಕ್ಕೆ ಮುಂದಾಗಿ.!
2013-18 ಹಾಗೂ 2023 ರಿಂದ ಮತ್ತೆ ತಲೆ ಎತ್ತಿದ ಕಂಬಗಳು
5-6 ವರ್ಷದ ಹಿಂದೇ ಪತ್ರ ಬರೆಯದೇ, ಸದ್ಯ ಶಾಸಕರು ಬರೆದ ಪತ್ರಕ್ಕೆ ಹಲವೆಡೆ ಆಕ್ರೋಶ
ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಯಾಕೆ?
ಕೇಂದ್ರದತ್ತ ಬೆರಳು ತೋರುವ ಬದಲು ರೈತರ ಸಂಕಷ್ಟಕ್ಕೆ ಸ್ಪಂದಿಸಿ.
ಯಲಬುರ್ಗಾ: ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದಂತೆ ಎಂಬ ಗಾದೆ ಮಾತಿನಂತೆ ಶಾಸಕ ಬಸವರಾಜ ರಾಯರಡ್ಡಿ ಬರೆದಿರುವ ಪತ್ರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಷೇತ್ರದ ಅನ್ನದಾತರ ಜಮೀನುಗಳಿಗೆ ಸಂಬಂಧಿಸಿದಂತೆ ಪತ್ರ ಬರೆದಿರುವ ಶಾಸಕ ಬಸವರಾಜ ರಾಯರಡ್ಡಿ ಅವರೇ ರೈತರಿಗೆ ಪತ್ರ ಬರೆಯುವ ಬದಲು ರೈತರನ್ನು ಒಗ್ಗೂಡಿಸಿಕೊಂಡು ಹೋರಾಟಕ್ಕೆ ಮುಂದಾಗಿ, ಅವಾಗ ಮಾತ್ರ ತಮ್ಮ ಪತ್ರದ ಮರ್ಮ ಎಲ್ಲರಿಗೂ ಅರ್ಥವಾಗಲಿದೆ.
ತಮ್ಮ ಅಧಿಕಾರ ಅವಧಿಯಲ್ಲಿಯೇ ಕ್ಷೇತ್ರದಲ್ಲಿ ಆಗುತ್ತಿರುವ ಪವನ ವಿದ್ಯುತ್ ಶಕ್ತಿ ಹಾಗೂ ಬೃಹತ್ ವಿದ್ಯುತ್ ಕಂಬಗಳ ಅಳವಡಿಕೆಗೆ ಸಂಬಂಧಿಸಿದಂತೆ ಮಧ್ಯವರ್ತಿಗಳಿಂದ ಹಾಗೂ ತಮ್ಮ ಹಿಂಬಾಲಕರಿಂದಾಗುತ್ತಿರುವ ಅನ್ಯಾಯವನ್ನು ತಡೆಯಲು ಮುಂದಾಗದೇ, ಜು. 6 ರಂದು ರೈತರಿಗೆ ಪತ್ರ ಬರೆದಿರುವುದು ಅನ್ನದಾತರ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ.?
ಶಾಸಕ ರಾಯರಡ್ಡಿ ಅವರು ಜು. 1 ರಿಂದ ಜು. 3 ರವರೆಗೆ ಎರಡು ರಾತ್ರಿ ಹೊಸಪೇಟೆಯಲ್ಲಿಯೇ ವಾಸ್ತವ್ಯ ಹೂಡಿ, ಇನ್ನೂ ಮೂರು ದಿನ ಹಗಲು ವೇಳೆ ಕ್ಷೇತ್ರ ಹಾಗೂ ಕೊಪ್ಪಳದ ಜಿಲ್ಲಾ ಆಡಳಿತ ಭವನದಲ್ಲಿ ಕೈಗೊಂಡ ಪ್ರವಾಸದ ವೇಳೆ ಉಲ್ಬಣಗೊಂಡ ಪವನ ವಿದ್ಯುತ್ ಕಂಬಗಳ ಅಳವಡಿಕೆಗೆ ಸಂಬಂಧಿಸಿದಂತೆ 5-6 ವರ್ಷಗಳಿಂದ ರೈತರಿಗೆ ಅಥವಾ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯದೇ ಮಧ್ಯವರ್ತಿಗಳಿಂದ ಹಾಗೂ ತಮ್ಮ ಹಿಂಬಾಲಕರಿಂದ ಆಗುತ್ತಿರುವ ಅನ್ಯಾಯವನ್ನು ತಡೆಯಲು ಮುಂದಾಗದೇ ಜು. 6 ರಂದು ರೈತರಿಗೆ ಪತ್ರ ಬರೆದಿರುವುದು ಅಪಹಾಸ್ಯವೇ ಸರಿ.
ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನೆಗೆ ಸೋಲಾರ್, ಪ್ಯಾನಲ್ ವಿಂಡ್ ಮಿಲ್ ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸುವ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ರೈತರಿಗೆ ಪತ್ರ ಬರೆದಿರುವುದಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗುತ್ತಿದೆ.
ಕಳೆದ ಒಂದು ವಾರದ ಹಿಂದೆ ನಮ್ಮ ಪತ್ರಿಕೆಯಿಂದ 'ಶಾಸಕ ಬಸವರಾಜ ರಾಯರಡ್ಡಿ ಬಂದ್ರು ದಾರಿ ಬಿಡಿ ಪ್ಲೀಸ್' ಎಂಬ ತಲೆ ಬರಹದಡಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಸುದ್ದಿಯಲ್ಲಿ ಕ್ಷೇತ್ರದ ಅನ್ನದಾತರು ಪವನ ವಿದ್ಯುತ್ ಶಕ್ತಿ ಉತ್ಪಾದನೆ ಮತ್ತು ಬೃಹತ್ ಕಂಬಗಳ ಅಳವಡಿಕೆಗೆ ಸಂಬಂಧಿಸಿದಂತೆ ಅನುಭವಿಸುತ್ತಿರುವ ಕುರಿತು ಸುದ್ದಿ ಬಿತ್ತರಿಸಿ, ಸುದ್ದಿಯಲ್ಲಿ ಅನ್ನದಾತರು ಅನುಭವಿಸುತ್ತಿರುವ ಕುರಿತು ಶಾಸಕ ರಾಯರಡ್ಡಿ ಯಾವ ಕ್ರಮಕ್ಕೆ ಮುಂದಾಗಲಿದ್ದಾರೆ ಎಂಬುದನ್ನು ಕಾದು ನೋಡೋಣ ಎಂಬ ಆಶಾ ಮನೋಭಾವ ವ್ಯಕ್ತ ಪಡಿಸಿತ್ತು. ಯಾವುದೇ ಕ್ರಮಕ್ಕೆ ಮುಂದಾಗದೇ ರೈತರಿಗೆ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರವು ಕೃಷಿ ಆಧಾರಿತ ಪ್ರದೇಶವಾಗಿರುತ್ತದೆ ಹಾಗೂ ಇಲ್ಲಿಯ ಜನ ಕೃಷಿಯ ಮೇಲೆಯೇ ಸಂಪೂರ್ಣ ಅವಲಂಬಿತಾರಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ನೀರಾವರಿಯನ್ನು ಮಾಡಲು ನಮ್ಮ ತಾಲೂಕಿನಲ್ಲಿ ಅವಕಾಶವಿರುತ್ತದೆ, ಈಗ ಕಳೆದ 5-6 ವರ್ಷದ ಹಿಂದೆ ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನೆಗೆ ಸೋಲಾರ್, ಪ್ಯಾನಲ್ ವಿಂಡ್ ಮಿಲ್ ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸುವ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈ ಯೋಜನೆಯು ಕೇವಲ ಯಲಬುರ್ಗಾ ಮಾತ್ರವಲ್ಲದೆ ಪಕ್ಕದ ರೋಣ, ಕುಷ್ಟಗಿ, ಗದಗ ಹಾಗೂ ಹುನಗುಂದ ತಾಲೂಕುಗಳಲ್ಲಿ ಕೇಂದ್ರ ಸರ್ಕಾರದ ಪರವಾನಿಗೆಯೊಂದಿಗೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಕೇಂದ್ರ ಸರ್ಕಾರ ಸೋಲಾರ್ ಪ್ಯಾನಲ್, ವಿಂಡ್ ಮಿಲ್ ಹಾಗೂ ವಿದ್ಯುತ್ ಉತ್ಪಾದನೆಗೆ ರೈತರ ಜಮೀನನ್ನು ತೆಗೆದುಕೊಳ್ಳದೇ ಲಭ್ಯವಿರುವ ಸರ್ಕಾರಿ ಭೂಮಿಯಲ್ಲಿ ಉತ್ಪಾದನೆ ಮಾಡಲು ಕಾನೂನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸುತ್ತೇನೆಂದು ಪತ್ರದಲ್ಲಿ ಉಲ್ಲೇಖಿಸಿದ್ದೀರಿ.
ಈ ಎಲ್ಲಾ ಯೋಜನೆಗಳಿಗೆ ಸಂಭಂದಿಸಿದ ಕೇಂದ್ರ ಸರ್ಕಾರಗಳ ಕಂಪನಿ ಹಾಗೂ ಖಾಸಗಿ ಕಂಪನಿಗಳು ಈ ತರಹದ ವಿದ್ಯುತ್ ಉತ್ಪಾದನೆ ಮಾಡಲು ಪ್ರೋತ್ಸಾಹ ನೀಡುತ್ತಿದೆ ಹಾಗೂ ಖಾಸಗಿ ಕಂಪನಿಗಳಿಗೆ ಅನುಕೂಲ ವಾಗುವಂತೆ ಸಂಪೂರ್ಣ ಕಾನೂನುಗಳನ್ನು ಮಾಡಿ ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಹಾಗೂ ರೈತರ ಜಮೀನಿಗೆ ಬೆಲೆ ನಿಗದಿಪಡಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಯಾಗಿದೆ ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಕಾನೂನು ರೂಪಿಸುವ ಹಕ್ಕು ಮತ್ತು ಜವಾಬ್ದಾರಿ ಇರುವುದಿಲ್ಲ ಅಂತಾ ಪತ್ರದಲ್ಲಿ ಹೇಳಿದ್ದೀರಿ. ಇದನ್ನು ವಿರೋಧಿಸಿ ತಾವು ಹೋರಾಟ ಮಾಡಬಹುದಿತ್ತಲ್ಲ. ಎಲ್ಲವೂ ಮುಗಿದ ಮೇಲೆ ಪತ್ರ ಬರೆದಿರುವುದು ಯಾವ ಪುರುಷಾರ್ಥಕ್ಕೆ ಎಂಬುದೇ ಅರ್ಥವಾಗುತ್ತಿಲ್ಲ.
ಕಳೆದ 2013-18 ರವರೆಗೆ ರಾಯರಡ್ಡಿ ಶಾಸಕರಾಗಿದ್ದಾಗ ಮಾತ್ರ ಯಲಬುರ್ಗಾ ಕ್ಷೇತ್ರದಲ್ಲಿ ಹೆಚ್ಚು ಪವನ ವಿದ್ಯುತ್ ಕಂಬಗಳ ಸ್ಥಾಪನೆಯಾಗಿರುವುದು ಅಂಕಿ ಅಂಶಗಳಿಂದ ಬಯಲಾಗಿದೆ. ಇನ್ನೂ ಮತ್ತೆ ರಾಯರಡ್ಡಿ ಶಾಸಕರಾಗಿ 3 ವರ್ಷವಾದಗಿನಿಂದಲೂ ಹೆಚ್ಚು ವಿದ್ಯುತ್ ಕಂಬಗಳ ಸ್ಥಾಪನೆ ನಡೆಯುತ್ತಿರುವುದು ಇದು ಕೇಂದ್ರ ಸರ್ಕಾರದ ದುರ್ಬಳಕೆಯೋ ಅಥವಾ ತಮ್ಮ ಕೃಪಾ ಪೋಷಿತವೋ ಎಂಬುದು ಕ್ಷೇತ್ರದ ಜನರಿಗೆ ಸತ್ಯ ದರ್ಶನವಾಗಲಿದೆ.
ಕ್ಷೇತ್ರ ಸೇರಿದಂತೆ ನೆರೆಹೊರೆಯ ಕ್ಷೇತ್ರಗಳಲ್ಲಿ ಪವನ ವಿದ್ಯುತ್ ಶಕ್ತಿ ಉತ್ಪಾದಿಸಲು ವಿದ್ಯುತ್ ಕಂಬಗಳ ಸ್ಥಾಪನೆಯಾಗುತ್ತಿದೆ. ಒಪ್ಪಿಕೊಳ್ಳುವ ಸಂಗತಿಯೇ. ಆದರೆ, ನಿಮ್ಮ ಬೆಂಬಲಿಗರೇ ಕಂಪನಿಯ ಮಧ್ಯವರ್ತಿಗಳಾಗಿ ತಮ್ಮ ಹೆಸರನ್ನು ಬಳಕೆ ಮಾಡಿಕೊಂಡು ರೈತರ ಮೇಲೆ ದರ್ಪ ತೋರಿರುವ ಉದಾಹರಣೆಗಳಿವೆ. ಇದಕ್ಕೆ ಸಂಬಂಧಿಸಿದಂತೆ ಕೆಲವೆಡೆ ಪ್ರಕರಣಗಳು ದಾಖಲಾಗಿವೆ. ನಿಮಗೆ ಕ್ಷೇತ್ರದ ಅನ್ನದಾತರ ಮೇಲೆ ಅಷ್ಟೊಂದು ಕಾಳಜಿ ಇದ್ದಿದ್ದೆ ಆದರೆ 2013-18 ರವರೆಗೂ ತಮ್ಮ ಅಧಿಕಾರ ಅವಧಿಯಲ್ಲಿ ಒಂದು ದಿನಾನೂ ಈ ಬಗ್ಗೆ ಮಾತನಾಡಲಿಲ್ಲ. ಅಲ್ಲದೇ ತಾವು ಪರಾಭವಗೊಂಡಾಗಲು ಸಹ ಒಂದು ದಿನ ಬೀದಿಗಳಿದು ರೈತರ ಪರ ಹೋರಾಟ ಮಾಡಲಿಲ್ಲವೇಕೆ.? ಮುಂದುವರೆದು ಸದ್ಯ ತಾವೇ ಕ್ಷೇತ್ರದ ಶಾಸಕರಿದ್ದೀರಿ. ರಾಜ್ಯ ಸರ್ಕಾರದ ಯಾವುದೇ ಕಾನೂನು ರೂಪಿಸುವ ಹಕ್ಕು ಮತ್ತು ಜವಾಬ್ದಾರಿ ಇರುವುದಿಲ್ಲ ಎಂಬ ನಿಮ್ಮ ಹೇಳಿಕೆಯಂತೆ ಕ್ಷೇತ್ರದ ಅನ್ನದಾತರ ಪರವಾಗಿ ಕೇಂದ್ರ ಸರ್ಕಾರದ ವಿರುದ್ಧ ಯಾಕೆ ಹೋರಾಟಕ್ಕೆ ಮುಂದಾಗಿಲ್ಲ. ರಾಯರಡ್ಡಿ ಅವರೇ ಪತ್ರದ ಮೂಲಕ ಮೊಸಳೆ ಕಣ್ಣೀರು ಹೊರೆ ಸುವ ಬದಲು ನೀವು ಬೀದಿಗಳು ಹೋರಾಟಕ್ಕೆ ಮುಂದಾಗಿ ಅವಾಗ ನಿಮ್ಮ ನಿಜ ಬಣ್ಣ ಏನೆಂಬುದು ಎಲ್ಲರಿಗೂ ತಿಳಿಯುತ್ತದೆ. ಅದನ್ನು ಬಿಟ್ಟು ಪತ್ರ ಬರೆದು ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡದೀರಿ.
'ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ನಿಜವಾಗಿಯೂ ನಿಮಗೆ ಕ್ಷೇತ್ರದ ಅನ್ನದಾತರ ಬಗ್ಗೆ ಕಾಳಜಿ ಇದ್ದರೇ. ರೈತರ ಜೊತೆಗೆ ಸೇರಿಕೊಂಡು ಬೀದಿಗಿಳಿದು ಹೋರಾಟಕ್ಕೆ ಬನ್ನಿ ನಾವೆಲ್ಲರೂ ಪಕ್ಷ ಭೇದ ಮರೆತು ನಿಮ್ಮ ಹೋರಾಟಕ್ಕೆ ಕೈ ಜೋಡಿಸುತ್ತೇವೆ. ಅದನ್ನು ಬಿಟ್ಟು ಮೊಸಳೆ ಕಣ್ಣೀರು ಹಾಕುವ ರೀತಿ ಪತ್ರ ಬರೆದಿರುವುದು ಯಾವ ಪುರುಷಾರ್ಥಕ್ಕೆ. | ಮಲ್ಲನಗೌಡ ಕೋನನಗೌಡ್ರ, ಜೆಡಿಎಸ್ ಜಿಲ್ಲಾ ವಕ್ತಾರ.
