ಯಲಬುರ್ಗಾ: ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ರೈತನಿಗೆ ಭಾರೀ ನಷ್ಟ ಉಂಟಾದ ಘಟನೆ ನಡೆದಿದೆ. ಮೂರು ತೆಂಗಿನ ಮರಗಳು ಹಾಗೂ ಒಂದು ಬಿತ್ತುವ ಕೂರಿಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಗ್ರಾಮದ ಗವಿಸಿದ್ದಪ್ಪ ಅಟಮಾಳಗಿ ಅವರ ಮನೆ ಮುಂದೆ ಇದ್ದ ಎತ್ತರದ ತೆಂಗಿನ ಮರಕ್ಕೆ ಏಕಾಏಕಿ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಮರದಲ್ಲಿ ಬೆಂಕಿ ಕಾಣಿಸಿಕೊಂಡು, ಅದರ ಜ್ವಾಲೆ ಹತ್ತಿರದಲ್ಲಿದ್ದ ಇನ್ನೆರಡು ತೆಂಗಿನ ಮರಗಳಿಗೂ ವ್ಯಾಪಿಸಿ ಅವು ಕೂಡ ಸುಟ್ಟು ಹಾನಿಗೊಂಡಿವೆ.
ಇದೇ ವೇಳೆ ಸಮೀಪದಲ್ಲಿದ್ದ ಕೃಷಿ ಕಾರ್ಯಗಳಿಗೆ ಬಳಸುವ ಬಿತ್ತುವ ಕೂರಿಗೂ ಬೆಂಕಿ ತಗುಲಿ ಅದು ಕೂಡ ಸಂಪೂರ್ಣ ಹಾನಿಗೊಳಗಾಗಿದೆ. ಈ ಘಟನೆಯಿಂದ ರೈತನಿಗೆ ಗಮನಾರ್ಹ ಆರ್ಥಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಿಡಿಲಿನ ಈ ಅವಘಡದಿಂದ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು
