ಪಟ್ಟಣದ 15ನೇ ವಾರ್ಡ್‌ನ ವಿಜಯನಗರ ಬಡಾವಣೆಯಲ್ಲಿ ಚರಂಡಿ ಸಮಸ್ಯೆ, ಅರ್ಧಂಬರ್ಧ ಕಾಮಗಾರಿಗಳು ಹಾಗೂ ಕುಡಿಯುವ ನೀರಿನ ಸಂಕಷ್ಟದಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಸಮಸ್ಯೆಗಳಿಗೆ ಜನಪ್ರತಿನಿಧಿಗಳ ನಿರ್ಲಕ್ಷವೇ ಕಾರಣ ಎಂದು ನಿವಾಸಿಗಳು ಆರೋಪಿಸಿದ್ದಾರೆ. ವಾರ್ಡ್‌ನಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗಾಗಿ ಸಿಸಿ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಹಲವು ಕಡೆ ಕಾಮಗಾರಿಗಳು ಅರ್ಧದಲ್ಲೇ ನಿಲ್ಲಿಸಲಾಗಿದೆ. ಇದರಿಂದ ರಸ್ತೆಗಳು ಹದಗೆಟ್ಟು ಸಾರ್ವಜನಿಕರು ಸಂಚಾರದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇನ್ನೂ ಚರಂಡಿ ನೀರು ಸರಾಗವಾಗಿ ಹರಿಯದೆ ಮನೆಗಳ ಮುಂದೆ ನಿಂತುಕೊಂಡು ದುರ್ವಾಸನೆ ಹರಡುತ್ತಿದ್ದು, ನಿವಾಸಿಗಳಲ್ಲಿ ವಿವಿಧ ಕಾಯಿಲೆಗಳ ಭೀತಿ ಹೆಚ್ಚಾಗಿದೆ. ದೇವಸ್ಥಾನಗಳಿಗೆ ಹೋಗುವುದಕ್ಕೂ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಬಂಧಪಟ್ಟ ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ಅಧಿಕಾರಿಗಳು ತಕ್ಷಣ ಸಮಸ್ಯೆಗಳಿಗೆ ಸ್ಪಂದಿಸಿ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಅರ್ಧಂಬರ್ಧವಾಗಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ವಾರ್ಡ್ ನಿವಾಸಿಗಳು ಒತ್ತಾಯಿಸಿದ್ದಾರೆ.
