ರೈತರಿಗೆ ಅವಾಜ್ ಹಾಕಿದ ರಾಯರೆಡ್ಡಿ ಆಪ್ತ
ರೈತರ ಮೇಲೆ ದರ್ಪ ತೋರುತ್ತಿರುವ ಕೆಎಮ್ಎಫ್ ನಾಮ ನಿರ್ದೇಶಕ
ಯಲಬುರ್ಗಾ: ತಾಲೂಕಿನ ಚಿಕ್ಕಮ್ಯಾಗೇರಿ-ಮುರಡಿ ಗ್ರಾಮಗಳ ಗ್ರಾಮೀಣ ಒಳ ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರೈತರಿಗೆ ಏಕ ವಚನದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಆಪ್ತ ಕೆಎಮ್ಎಫ್ ನಾಮ ನಿರ್ದೇಶಕ ಹಂಪಯ್ಯ ಸ್ವಾಮಿ ಹಿರೇಮಠ ಅವಾಜ್ ಹಾಕಿದ ಘಟನೆ ಸೋಮವಾರ ನಡೆದಿದೆ.
ಕಳೆದ ಐದಾರು ತಿಂಗಳಿನಿಂದ ಮುರಡಿಯಿಂದ ಚಿಕ್ಕಮ್ಯಾಗೇರಿ ಗ್ರಾಮದ ವರೆಗೆ ಸಂಪರ್ಕ ಕಲ್ಪಿಸುವ ಒಳ ಗ್ರಾಮೀಣ ರಸ್ತೆಯ ಕಾಮಗಾರಿಯನ್ನು ಪಂಚಾಯತ್ ರಾಜ್ ಇಂಜನಿಯರ್ ಉಪ ವಿಭಾಗದಿಂದ ಕೈಗೆತ್ತಿಗೊಳ್ಳಲಾಗಿದೆ. ಮುರಡಿ ಗ್ರಾಮದಿಂದ ಈಗಾಗಲೇ 31 ಅಡಿಗೆ ರಸ್ತೆಯನ್ನು ಅಗಲೀಕರಣ ಮಾಡಿಕೊಂಡು ಬಂದು ಅರ್ಥ ವರ್ಕ್ ಮಾಡಲಾಗಿದೆ. ಆದರೆ, ಚಿಕ್ಕಮ್ಯಾಗೇರಿ ಗ್ರಾಮದ ಸೀಮಾಂತರದಲ್ಲಿನ ಚಂಡೂರು,ಕುರಿ, ಬಾದ್ರಿ, ದಮ್ಮೂರು ಇವರ ಜಮೀನಿನ ಹತ್ತಿರ ರಸ್ತೆಯನ್ನು ಅಗಲೀಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಹಾಗೂ ರೈತರ ಮಧ್ಯ ವಾಗ್ವಾದ ನಡೆಯುತ್ತಿತ್ತು. ಆದರೆ, ಏಕಾಏಕಿ ಆಗಮಿಸಿದ ಕಾಂಗ್ರೆಸ್ ಮುಖಂಡ ಹಾಗೂ ರಾಯರೆಡ್ಡಿ ಆಪ್ತ ಕೆಎಮ್ಎಫ್ ನಾಮ ನಿರ್ದೇಶಕ ಹಂಪಯ್ಯಸ್ವಾಮಿ ಹಿರೇಮಠ ಅವರು ಯಾರೇ ವಿರೋಧ ಮಾಡಿದ್ರೂ ಸಹ ಅವರಿಗೆ ತಕ್ಕ ಶಾಸ್ತಿ ಮಾಡಿಸೋಣ, ಯಾವನರ್ ಏನರ್ ಅಂದ್ರ ನನಗ ಹೇಳು ಎಂದು ಏಕವಚನದಲ್ಲಿ ರೈತರಿಗೆ ಅವಾಜ್ ಹಾಕಿದ ಕೈ-ಕೈ ಮೀಲಾಯಿಸಿದ ಪ್ರಸಂಗ ಜರುಗಿತು.
ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತ ಪಡಿಸಿ, ನೀವು ಒಬ್ಬರೇ ಕಾಂಗ್ರೆಸ್ ನವರಲ್ಲ. ನಾವು ಸಹ ಕಾಂಗ್ರೆಸ್ ನವರೇ ನಮ್ಮ ಅಪ್ಪನ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದೇವೆ. ನಿನ್ನೆ-ಮೊನ್ನೆ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ. ನಾವು ರಾಯರೆಡ್ಡಿಗೆ ಮಾತನಾಡುತ್ತೇವೆ ಎಂದು ಸ್ಥಳದಲ್ಲಿಯೇ ರಾಯರೆಡ್ಡಿಗೆ ದೂರು ವಾಣಿ ಕರೆ ಮಾಡಿದ್ರು ರಾಯರೆಡ್ಡಿ ಕರೆ ಸ್ವೀಕರಿಸಲಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ತಕ್ಕ ಪಾಠ: ನಮ್ಮ ಜಮೀನುಗಳಿಗೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ ರಾಯರೆಡ್ಡಿ ಯವರಿಗೆ ಹಲವು ಬಾರಿ ಮನವಿ ಮಾಡಿದ್ದೇವು. ಆದರೆ, ಇತ್ತೀಚಿಗೆ ಅನುದಾನ ಕೊಡಿಸುವ ಮೂಲಕ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಸಂತಸ ತಂದಿತ್ತು. ಆದರೆ, ನಿನ್ನೆ-ಮೊನ್ನೆ ಅಷ್ಟೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಹಂಪಯ್ಯಸ್ವಾಮಿ ಹಿರೇಮಠಗೆ ಹಾಲು ಉತ್ಪಾದಕ ಸಹಕಾರ ಸಂಘದ ನಾಮ ನಿರ್ದೇಶಕ ಸರ್ಕಾರಿ ಪದವಿ ಪೂರ್ವ ಕಾಲೇಜು ಸಿಡಿಸಿ ಉಪಾಧ್ಯಕ್ಷ ಹಾಗೂ ಕೆಎಮ್‌ಎಫ್ ನಾಮ ನಿರ್ದೇಶಕ ಹುದ್ದೆಯನ್ನು ನೀಡುವ ಮೂಲಕ ರಾಯರೆಡ್ಡಿ ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇಂತವರನ್ನು ಬೆಳೆಸುವ ಮೂಲಕ ನಮಗೆ ಅನ್ಯಾಯ ಮಾಡಲು ಮುಂದಾದ ರಾಯರೆಡ್ಡಿಗೆ ಮುಂದಿನ ದಿನ ಮಾನಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ಗ್ರಾಮದ ನಿಂಗಪ್ಪ ಕುರಿ, ಬಸಪ್ಪ ದಮ್ಮೂರ, ಯಮನರಪ್ಪ ಕುರಿ, ಶರಣಪ್ಪ ಬಾದ್ರಿ, ರಮೇಶ ದಮ್ಮೂರ, ಕಳಕಪ್ಪ ಬಾದ್ರಿ, ರಾಜೇಸಾಬ ಜಾತಿಗೇರ, ಬಸವರಾಜ ಮೆಳ್ಳಿಕೇರಿ ಇತರರು ಎಚ್ಚರಿಸಿದರು.
ರಾಯರೆಡ್ಡಿ ಬೆಂಬಲಿಗ ಹಾಗೂ ಕೆಎಮ್ಎಫ್ ನಾಮನಿರ್ದೇಶಕ ಹಂಪಯ್ಯಸ್ವಾಮಿ ಹಿರೇಮಠ ಅವರು ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರೈತ-ರೈತರ ಮಧ್ಯ ಜಗಳವನ್ನು ತಂದಿಟ್ಟು ಮೋಜು ನೋಡುತ್ತಿದ್ದಾರೆ. ಗ್ರಾಮೀಣ ರಸ್ತೆ ನಿರ್ಮಾಣ ಕ್ಕೂ ಹಂಪಯ್ಯಸ್ವಾಮಿ ಗೂ ಯಾವುದೇ ಸಂಬಂಧವಿಲ್ಲ. ಅಥವಾ ಅವರ ಜಮೀನು ಸಹ ಈ ರಸ್ತೆಯಲ್ಲಿ ಇಲ್ಲ. ಆದರೂ ಸಹ ಅಧಿಕಾರಿಗಳು ಸಮಸ್ಯೆ ಇತ್ಯರ್ಥಕ್ಕೆ ಆಗಮಿಸಿದ ಸಂದರ್ಭದಲ್ಲಿ ತಾವು ಏಕಾಏಕಿ ಮೂಗು ತೂರಿಸಿ ಬರುತ್ತಿರುವುದರ ಹಿಂದೇ ಏನೋ ಮರ್ಮವಿದೆ. ಹಂಪಯ್ಯಸ್ವಾಮಿ ಶಾಸಕ ಬಸವರಾಜ ರಾಯರೆಡ್ಡಿ ಹೆಸರು ಹೇಳಿಕೊಂಡು ಅಧಿಕಾರಿ ಮತ್ತು ಗುತ್ತಿಗೆದಾರರನ್ನು ಕೈಗೆ ತೆಗೆದುಕೊಂಡು ರೈತರ ಮೇಲೆ ವಿನಾಃಕಾರಣ ತೊಂದರೆ ಕೊಡುತ್ತಿದ್ದಾನೆ. ಮೂರು ಮೂರು ಹುದ್ದೆಯನ್ನು ನೀಡಿದ ರಾಯರೆಡ್ಡಿ ಹಂಪಯ್ಯಸ್ವಾಮಿ ಗೆ ಬ್ರೇಕ್ ಹಾಕಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
