ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ವಿವಾಹ ಕಾರ್ಯಕ್ರಮಗಳನ್ನು ನೆರವೇರಿಸಲು ಸಮುದಾಯ ಭವನಗಳು ಮಹತ್ವದ ಪಾತ್ರವಹಿಸುತ್ತಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಚಿಕ್ಕವಂಕಲಕುಂಟ ಗ್ರಾಮದಲ್ಲಿ 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯಮಂತ್ರಿಗಳ ವಿವೇಚನಾ ನಿಧಿ ಹಾಗೂ 2024-25ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿ ನಿರ್ಮಿಸಲಾದ “ಬುದ್ಧ-ಬಸವ-ಅಂಬೇಡ್ಕರ್ ಸಾಂಸ್ಕೃತಿಕ ಭವನ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರೇವಂಕಲಕುಂಟ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಮದುವೆ ಹಾಗೂ ಇತರೆ ಸಮಾರಂಭಗಳಿಗಾಗಿ ಕುಷ್ಟಗಿ, ಕನಕಗಿರಿ, ಕೊಪ್ಪಳಗಳಿಗೆ ತೆರಳಬೇಕಾಗಿದ್ದ ಪರಿಸ್ಥಿತಿ ಇತ್ತು. ಇದೀಗ ಗ್ರಾಮದಲ್ಲೇ ಸಮುದಾಯ ಭವನ ನಿರ್ಮಾಣಗೊಂಡಿರುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಭವನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು. ಸರ್ಕಾರದಿಂದ ನಿರ್ಮಿಸಲಾದ ಸಮುದಾಯ ಭವನಗಳು ಜನರ ಸಾಮಾಜಿಕ ಹಾಗೂ ಆರ್ಥಿಕ ಅಗತ್ಯಗಳನ್ನು ಪೂರೈಸುವ ಉದ್ದೇಶ ಹೊಂದಿವೆ. ಖಾಸಗಿ ಮಂಟಪಗಳ ಹೆಚ್ಚಿದ ಬಾಡಿಗೆಯನ್ನು ಭರಿಸಲು ಅಸಮರ್ಥವಾಗಿರುವ ಬಡ ಕುಟುಂಬಗಳಿಗೆ ಇವು ಸಹಾಯಕವಾಗಿವೆ ಎಂದು ಹೇಳಿದರು. ಇಂತಹ ಭವನಗಳನ್ನು ಬಡವರಿಗೆ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುವುದು. ಸಮೂಹ ವಿವಾಹಗಳಿಗೆ ಉತ್ತೇಜನ ನೀಡುವುದರಿಂದ ಅನಗತ್ಯ ವೆಚ್ಚ ಕಡಿಮೆಯಾಗುವುದರ ಜೊತೆಗೆ ಸಮಾಜದಲ್ಲಿ ಸಮಾನತೆ ಬಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಸಮುದಾಯ ಭವನಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿವಿಧ ಭಾಗಗಳ ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದ್ದು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗಿದೆ. ಅಲ್ಲದೇ ವಿವಿಧ ಪ್ರದೇಶಗಳಲ್ಲಿ ಬಸ್ ನಿಲ್ದಾಣಗಳ ನಿರ್ಮಾಣ ಕಾರ್ಯವೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಆರು ಜೋಡಿಗಳ ಸಾಮೂಹಿಕ ವಿವಾಹ ನೆರವೇರಿತು. ಜಿಪಂ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ ಮಾತನಾಡಿ, ಶಾಸಕ ರಾಯರಡ್ಡಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಹಿರಿಯ ಮುಖಂಡ ರಾಘವೇಂದ್ರಚಾರ್ಯ ಜೋಶಿ ಅವರು ಹಿರೇವಂಕಲಕುಂಟ ಭಾಗಕ್ಕೆ ಹೆಚ್ಚಿನ ಅನುದಾನ ಒದಗಿಸಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಹನುಮಂತಗೌಡ ಚೆಂಡೂರು, ಸಮಾಜಸೇವಕ ಎಸ್.ಆರ್. ನವಲಿಹಿರೇಮಠ, ವೀರನಗೌಡ ಪೋಲಿಸಪಾಟೀಲ, ಚಂದ್ರಶೇಖರಯ್ಯ ಹಿರೇಮಠ, ಅಡಿವೆಪ್ಪ ಭಾವಿಮನಿ, ಮಹೇಶ ಹಳ್ಳಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಅಪ್ಪಣ್ಣ ಜೋಶಿ, ಸುಧೀರ ಕೊರ್ಲಳ್ಳಿ, ರುದ್ರಪ್ಪ ಮರಕಟ್, ಆದೇಶ ರೊಟ್ಟಿ ಸೇರಿದಂತೆ ಇತರರು ಇದ್ದರು.
