ಕಾವ್ಯ ಎನ್ನುವುದು ಸಾಹಿತ್ಯ ಲೋಕದ ಅಪರೂಪದ ಪ್ರಕಾರ. ಬಹುಶಃ ಜಗತ್ತಿನ ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯಕ್ಕೆ ದೊರಕಿದಷ್ಟು ಮಹತ್ವ ಬೇರಾವ ಪ್ರಕಾರಕ್ಕೂ ದೊರೆತಿಲ್ಲ.
ಕವಿತೆಯನ್ನು ಕುರಿತು ಸಾಕಷ್ಟು ವ್ಯಾಖ್ಯಾನಗಳು ಹುಟ್ಟಿದ್ದರೂ ಕವಿತೆಯನ್ನು ಸಂಪೂರ್ಣ ಅರ್ಥದಲ್ಲಿ ವಿವರಿಸಲು ಸಾಧ್ಯವಾಗಿಲ್ಲ. 'ಶಬ್ದಾರ್ಥೌ ಸಹಿತೌ ಕಾವ್ಯಂ' ಎಂಬ ಪ್ರಾಚೀನರ ಉಕ್ತಿಯಿಂದ ಹಿಡಿದು 'ಕವಿತೆ ನೀ ಪದಗಳಲ್ಲಿ ಏಕೆ ಅವಿತೆ' ಎನ್ನುವ ಆಧುನಿಕ ಕವಿಯ ವ್ಯಾಖ್ಯಾನದ ವರೆಗೂ ಕವಿತೆಯನ್ನು ವಿವರಿಸುವ ಪ್ರಯತ್ನಗಳು ನಡೆದಿವೆ. ಯಾರು ಏನೇ ಹೇಳಲಿ ಕವಿ ತನ್ನ ಅಂತರಂಗಕ್ಕೆ ನಿಷ್ಠನಾಗಿಯೇ ಬರೆಯುತ್ತಾನೆ.
ನೊಂದವರ ನೋವಿಗೆ ಜೊತೆಗಾರನಾಗಲೆಂದು, ದುಡಿಯುವವರ ಶ್ರಮಕ್ಕೆ ಗೌರವ ದೊರೆಯಬೇಕೆಂಬ ಆಶಯದಿಂದ ಕಹಿ ಅನಿಸಿದರೂ ಕಟು ಸತ್ಯವನ್ನು ಅತ್ಯಂತ ನೇರ ಮತ್ತು ನಿಷ್ಠರ ದ್ವನಿಯಲ್ಲಿ ಕಾವ್ಯವಾಗಿಸಬಲ್ಲ ಕವಿ ಬಾಗಲಕೋಟೆಯ ಗುರುಬಸವ ಎಂ ಸಿಂಧೂರ ಅವರು.ವೃತ್ತಿಯಿಂದ ಇಂಜಿನಿಯರ್, ಉದ್ಯಮಿ !. ಪ್ರವೃತ್ತಿಯಿಂದ ಕವಿ ಲೇಖಕ. ಈ ನಾಡಿನ ಸಾರಸ್ವತ ಲೋಕಕ್ಕೆ 33ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ ಸತ್ಯಸಂದರೂ, ಜನಪದ ಹೋರಾಟಗಾರರೂ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಹಿತ್ಯಿಕ ಕ್ಷೇತ್ರಗಳಲ್ಲಿ ಅವಿರತ ದುಡಿದು ಸಾಧನೆಗೈದು ಜನಮನದಲ್ಲಿ ನೆಲೆ ನಿಂತ ಎಂ ಎಸ್ ಸಿಂಧೂರ ಅವರ ಮಗ ಗುರುಬಸವ ಸಿಂಧೂರ ಎಂಬುವುದೊಂದು ಅಭಿಮಾನ.

ಇವರು ತಮ್ಮ ತಂದೆಯವರಿಂದ ಪ್ರಭಾವಿತರಾಗಿ ಕಾಯಕದ ಜೊತೆ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ ಸಹೃದಯಿ. ಸಮಾಜ ಎಂದರೆ ಹೀಗೆ ಇರಬೇಕೆಂದು ಹಲವಾರು ಕನಸುಗಳನ್ನು ಕಲ್ಪನೆಗಳನ್ನು ಇಟ್ಟುಕೊಂಡು ಹಲವಂದದಲ್ಲಿ ಸಾಮಾಜಿಕ ಚಿಂತನೆ ಮಾಡುತ್ತಾ ಬರವಣಿಗೆಯಲ್ಲಿ ತೊಡಗಿಕೊಂಡ ಸೂಕ್ಷ್ಮ ಮತ್ತು ಸಂವೇದನಾಶೀಲ ಕವಿ.! ಪ್ರಸ್ತುತ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಬಿಂಬ ಕೃತಿಯು ಇವರ ಮೂರನೆಯ ಕವನ ಸಂಕಲನವಾಗಿದೆ. ಬಿಂಬ ಕೃತಿಯಲ್ಲಿ 106 ವೈವಿಧ್ಯಮಯ ಮತ್ತು ವೈಶಿಷ್ಟ ಪೂರ್ಣ ಕವಿತೆಗಳಿವೆ. ಈ ಕೃತಿಯು 2005ರಲ್ಲಿ ತುಂಗಳದ ಸಿಂಧೂರ ಪ್ರಕಾಶನದಿಂದ ಪ್ರಕಟಗೊಂಡು ಓದುಗರ ಗಮನ ಸೆಳೆದಿದೆ.
'ಮನುಜರಾಚೆಯ ಬದುಕು' ಕವಿತೆಯಲ್ಲಿ
*ಅವ ಬಿಳಿಯ ಇವ ಕೆಂಪ*
*ನಾ ಕರಿಯ ಅಂತಿರಲಿಲ್ಲ*
*ಗುಣಕ್ಕೆ ಬೆಲೆ ಇದ್ದರೆ*|
*ಅವ ಹಾರುವ ಇವ ಲಿಂಗಾಯತ*
*ನಾ ಹೊಲೆಯ ಅಂತಿರಲಿಲ್ಲ*
*ಕಾಯಕವೇ ಕೈಲಾಸವಾಗಿದ್ದರೆ*|
ಇಡೀ ಕವಿತೆ ಜಾತಿ,ಮತ, ಧರ್ಮಗಳ ಹಂಗು ಹರಿದೊಗೆದು ಶ್ರಮ ಸಂಸ್ಕೃತಿಯನ್ನು, ಬಸವಣ್ಣನವರ ಕಾಯಕ ನಿಷ್ಠೆಯನ್ನು ಎತ್ತಿ ಹಿಡಿದಿದೆ. ವಿಶ್ವದಲ್ಲಿ ಇರುವ ಎಲ್ಲರಿಗೂ ದೇವರು ಒಬ್ಬನೇ ಎಂಬುದನ್ನು ಸಾರುತ್ತದೆ. ಈ ಸತ್ಯವನ್ನು ನಾವೆಲ್ಲ ತಿಳಿದು ಬಾಳಬೇಕು.
*ಅದು ಕಾಗೆ ಇದು ಗೂಬೆ*
*ಗುಬ್ಬಿ ಗಿಳಿಯಾಗಿದ್ದರೂ*
*ಚಿಲಿಪಿಲಿ ಗುಟ್ಟುತ್ತಿಲ್ಲವೇ*
*ಬಣ್ಣ ಭಾಷೆ ಗಡಿ ಜಾತಿ*
*ಧರ್ಮ ದೇವರುಗಳ ಎಲ್ಲೆ ಮೀರಿ|*
ಮನುಷ್ಯ ಎಲ್ಲ ಜೀವಿಗಳಿಗಿಂತ ಬುದ್ದಿವಂತ ಎನಿಸಿಕೊಂಡಿದ್ದಾನೆ. ಆದರೂ ಪ್ರಾಣಿ ಪಕ್ಷಿಗಳಿಗಿಂತ ಕೀಳಾಗಿಂತ ಕೀಳಾಗಿ ನಡೆದುಕೊಳ್ಳುತ್ತಾನೆ. ಏಕೆಂದರೆ ಪಕ್ಷಿಗಳು ಜಾತಿ, ಮತ, ಭಾಷೆ, ಬಣ್ಣ, ಧರ್ಮ, ದೇವರುಗಳ ಹಂಗು ತೊರೆದು ಬಂಧುತ್ವವನ್ನು ಉಳಿಸಿಕೊಂಡು ಬದುಕುತ್ತವೆ ಎನ್ನುವ ಸ್ಪಷ್ಟತೆಯನ್ನು ಈ ಕವಿತೆ ನೀಡುತ್ತದೆ.

ಇಂದು ಎಲ್ಲಿ ನೋಡಿದರಲ್ಲಿ ಕೋಮು ಗಲಭೆ ಅಸಮಾನತೆಯ ದಳ್ಳುರಿ ಎದೆ ಸುಡುತ್ತಿರುವಾಗ ಸುಖ ಶಾಂತಿ ನೆಮ್ಮದಿ ಕಳೆದುಕೊಂಡು ಬರಿ ಭ್ರಾಂತಿಯಲ್ಲಿ ಬದುಕುತ್ತಿದ್ದೇವೆ. ಕವಿ ಗುರುಬಸವ ಅವರು ಶಾಂತಿಯನ್ನು ಕಂಡುಕೊಳ್ಳುವ ರೀತಿಯೇ ಬೇರೆ. ಶಾಂತಿ ಎನ್ನುವ ಕವಿತೆಯಲ್ಲಿ
*ಜಗದ ಜನರಿಗೆಲ್ಲ ನಿನ್ನ*
*ಕಾಣುವಾಸೆ ಶಾಂತಿ*
*ಇಂದಲ್ಲದಿರೆ ನಾಳೆ ನೀನು*
*ಸಿಗುವಿ ಎಂಬ ಭ್ರಾಂತಿ*|
ಪ್ರತಿಯೊಂದು ಮತ ಧರ್ಮಗಳು ಶಾಂತಿಯನ್ನೇ ಸಾರುತ್ತವೆ, ಆದರೆ ಮತ ಧರ್ಮಕ್ಕಾಗಿ ದಿನನಿತ್ಯ ಕದನ ಯಾಕೆ ಎನ್ನುವ ಪ್ರಶ್ನೆ ಕವಿಯನ್ನು ಕಾಡುತ್ತದೆ. ದೇವರು ಧರ್ಮದಲ್ಲಿ ಇರಬಹುದು ಶಾಂತಿ ಆದರೆ ಧರ್ಮಾಂಧರೆಲ್ಲ ಕತ್ತಿ ಹಿಡಿದು ಹೊಡೆದಾಡಿದರೆ ಜಗದ ತುಂಬಾ ಅಶಾಂತಿಯೇ!.
*ಬೇರೆಯವರ ಮೊಗದಲ್ಲಿ*
*ಹುಡುಕಿ ಸೋತವರಿಗೇನಂತಿ*
*ನಮ್ಮ ನಮ್ಮ ಮನಸ್ಸುಗಳಲ್ಲಿ*
*ಒಮ್ಮೆ ಕೈಯಾಡಿಸಬೇಕಂತಿ?*
ಶಾಂತಿಯನ್ನು ಅಲ್ಲಿ ಇಲ್ಲಿ ಹುಡುಕಿ ಸೋತವರಿಗೆ ಏನು ಹೇಳಬೇಕು ನಮ್ಮನ್ನು ನಾವು ಸ್ವ ವಿಮರ್ಶೆಗೆ ಒಳಪಡಿಸಿಕೊಂಡು ಅರಿತು ನಡೆದಾಗ ನಮ್ಮ ನಮ್ಮ ಮನಸ್ಸಿನಲ್ಲಿ ಶಾಂತಿಯನ್ನು ಕಾಣಬಹುದು ಎನ್ನುವ ಸತ್ಯವನ್ನು ಈ ಕವಿತೆ ತಿಳಿಸುತ್ತದೆ.
"ದುಃಖದ ಮೂಲ"ಎಂಬ ಕವಿತೆಯಲ್ಲಿ ಬದುಕಿನ ನಿಜಾರ್ಥ ಅಡಗಿದೆ.ಲೂಟಿ ಮಾಡಿ ಕೋಟಿ ಕೋಟಿ ಗಳಿಸುವುದರಲ್ಲಿ ಯಾವ ಸುಖವೂ ಇಲ್ಲ ಎನ್ನುತ್ತಾರೆ.
*ಸಾವಿರ ಕೋಟಿ* *ಕೂಡಿಟ್ರೂನು*
*ತಿನ್ನುವುದು ಒಂದು ತುತ್ತು*
*ಕಾಗೆಯ ಹಂಗ*
*ಹಂಚಿ ತಿಂದರೆ* *ಹಾಳಾಗುವುದೇ ಸೊತ್ತು*
ಕೋಟಿ ಕೋಟಿ ಹಣವಿದ್ದರೂ ಹಸಿವಾದಾಗ ತಿನ್ನುವುದು ಹಣವನ್ನಲ್ಲ ಒಂದು ತುತ್ತು ಅನ್ನವನ್ನು. ಶ್ರಮವಹಿಸಿ ದುಡಿದು ಹಂಚಿಕೊಂಡು ಉಣ್ಣುವುದು ನಮ್ಮ ಸಂಸ್ಕೃತಿ.ಹಂಚಿ ಉಣ್ಣುವುದರಿಂದ ನಮ್ಮ ಸಿರಿ ಕಡಿಮೆಯಾಗುವುದಿಲ್ಲ.
*ಪಾಪದ ದುಡ್ಡು ಪ್ರಾಯಶ್ಚಿತಕ್ಕ*
*ದೇವರ ಹುಂಡಿಗೆ ಲಂಚ*
*ಗುಣ ನೋಡದೆ*
*ದುಡ್ಡಿನ ದೊರೆಗೆ*
*ಮತ ನೀಡಾವ ಕೆಂಚ*|
ಅನ್ಯಮಾರ್ಗದಿಂದ ಗಳಿಸಿದ ಹಣವನ್ನು ದೇವರ ಹುಂಡಿಗೆ ಲಂಚದ ರೂಪದಲ್ಲಿ ಹಾಕುವ ಜನ ಮತ್ತು ಗುಣ ನೋಡಿ ಮತ ಹಾಕದೆ ದುಡ್ಡು ಕೊಟ್ಟವರಿಗೆ ಮತ ಮಾರಿಕೊಳ್ಳುವ ಜನರ ಮೌಢ್ಯತೆ ಯನ್ನು ಅವಿಡಂಬನಾತ್ಮಕವಾಗಿ ನಿರೂಪಿಸಿದ್ದಾರೆ.
"ಉಂಟೆ ಈ ಜಗದಿ" ಎನ್ನುವ ಕವಿತೆಯಲ್ಲಿ
*ಹುಲ್ಲು ಬೀಜವ ಬಿತ್ತಿ*
*ನೆಲ್ಲ ಬೆಳೆದವರುಂಟೆ ?*
*ಬೇವ ಸಸಿಯನು ನೆಟ್ಟು*
*ಮಾವ ಸವಿದವರುಂಟೆ ?*
ನಾವು ಬಿತ್ತಿದ ಬೀಜದಂತೆ ಬೆಳೆ ನಮಗೆ ಸಿಗುತ್ತದೆ. ಬೇವನ್ನು ಬಿತ್ತಿ ಮಾವು ಬೇಕೆಂದರೆ ಸಿಗುವುದಿಲ್ಲ. ದೇವರ ಒಲುಮೆಯನ್ನು ಗಳಿಸಿದರೂ ಸಾವಿನಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಗಿಡದಿಂದ ಮಾವಿನ ಹಣ್ಣನ್ನು ಪಡೆಯಬೇಕಾದರೆ ಗಿಡ ಹತ್ತಿ ಮಾವನ್ನು ಹರಿಯಬೇಕೇ ವಿನಹ ಮಂತ್ರ ಹೇಳಿದರೆ ಮಾವು ಕೆಳಗೆ ಬೀಳುವುದಿಲ್ಲ ಎಂದು ಕವಿ ಹೇಳುತ್ತಾರೆ.
*ಜಾತಿ ಬೇಧದ ನಡುವೆ* *ಪ್ರೀತಿಯ ಅರಳುವುದುಂಟೆ* *ಧರ್ಮಾಂಧರು ಬೆಳೆದೊಡೆ*
*ಶಾಂತಿ ಮರಳುವುದುಂಟೆ* ಎಂದು ಕವಿ ಪ್ರಶ್ನಿಸುವ ರೀತಿ ಅತ್ಯಂತ ತಾರ್ಕಿಕವಾಗಿದೆ. ಜಾತಿಯ ಅಸಮಾನತೆ ಇರುವಿಡೆಯಲ್ಲಿ ಪ್ರೀತಿ ಹುಟ್ಟುವುದಿಲ್ಲ ಅಂತೆಯೇ ಧರ್ಮಾಂಧತೆ ಇರುವೆಡೆಯಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ.ಇಡೀ ಕವಿತೆ ತತ್ವಪದಕಾರರ ತತ್ವ ಬೋಧೆಯಂತಿದೆ.
'ಸಖಿಯ ಅಳಲು' ಕವಿತೆಯಲ್ಲಿ ಪ್ರೇಯಸಿ ತನ್ನ ಪ್ರೇಮಿಯನ್ನು ಕಾಯುವ ಬಗೆ ಮನಮೋಹಕವಾಗಿ ಚಿತ್ರಿತವಾಗಿದೆ.
*ತಿಂಗಳ ಬೆಳಕೂ*
*ಸುಡುತ್ತಿದೆ ಗೆಳೆಯ*
*ಆರದ ವಿರಹದ ಜ್ವಾಲೆ*
*ಇನಿಯನ ಬರುವೇ*
*ತರುವುದೇ ಮಳೆಯ*
*ಕಾದಿದೆ ಅರಿಯದ ಬಾಲೆ*
ಕೃಷ್ಣನಿಗಾಗಿ ಕಾಯುವ ರಾಧೆಯಂತೆ ಇಲ್ಲೊಬ್ಬ ಮುಗುದೆ ತನ್ನಿನಿಯನಿಗಾಗಿ ಕಾಯುತ್ತಿದ್ದಾಳೆ. ವಿರಹದ ಬೇಗೆಯಲ್ಲಿ ಹುಣ್ಣಿಮೆಯ ತಣ್ಣನೆಯ ಬೆಳದಿಂಗಳೂ ಹಿತವೆನಿಸುತ್ತಿಲ್ಲ.
*ಬಿಸಿಲ ಬೇಗೆಗೆ*
*ಬೇಯದೆ ತರುಲತೆ*
*ಮಿಡಿಯುತ ಕಾದಿಹೆ ನಿನಗಂತ*
*ಬೋಳು ಮರಗಳು*
*ಮರಳಿ ಚಿಗುರಿವೆ*
*ಬಂದೇ ಬರುವನು ವಸಂತ*|
ಬಿಸಿಲಿನ ಬೇಗೆಗೆ ತರುಲತೆಗಳು ಬಾಡಿ ಹೋಗುವಂತೆ ನಿನ್ನ ನೆನೆಯುತ್ತ ಕಾದಿದ್ದೇನೆ ಎಂದು ಹೇಳುತ್ತಾಳೆ. ಎಲೆಯುದುರಿದ ಬೋಳು ಮರ ಮತ್ತೆ ಚಿಗುರಿ ವಸಂತನ ಆಗಮನವನ್ನು ಸಂಭ್ರಮಿಸುವಂತೆ ತನಗೂ ತನ್ನ ಪ್ರಿಯತಮ ಬಂದೇ ಬರುತ್ತಾನೆ ಎಂಬ ನಂಬಿಕೆ ಪ್ರೇಯಸಿಯದು. ಈ ನಂಬಿಕೆಯೇ ಪ್ರೀತಿಯನ್ನು ಅಜರಾಮರಗೊಳಿಸುತ್ತದೆ.
ಸಾಮಾಜಿಕ ವೈರುಧ್ಯಗಳಿಗೆ ಬೇಸತ್ತ ಕವಿ "ಎಲ್ಲರೂ ಬನ್ನಿ ಸದಾಾರಿಯಲ್ಲಿ ಸಾಗೋಣ ಬನ್ನಿ" ಎಂದು ಕರೆ ನೀಡುತ್ತಾನೆ.ಜಾತಿ ಮತ ಧರ್ಮಗಳನ್ನು ಕಳಚಿಟ್ಟು, ಪ್ರೀತಿಯಲ್ಲಿ ನಂಬಿಕೆಯನ್ನು ಇಟ್ಟು, ಹೊಸ ನಾಡನ್ನು ಕಟ್ಟಬೇಕಿದೆ ಬನ್ನಿ ಎಂದು ಕರೆಯುತ್ತಾನೆ.ಮನುಷ್ಯ ಮನುಷ್ಯರ ನಡುವಿನ ಮೈಲಿಗೆ ಮುಡಚೆಟ್ಟು, ಅಸ್ಪೃಶ್ಯತೆಯನ್ನು ಬದಿಗಿಟ್ಟು ಬನ್ನಿ ಎಂದು ಕರೆಯುತ್ತಾನೆ.
*ಇಲ್ಲದ ದೇವರಿಗೆ*
*ಹರಕೆ ಹೊರುವುದು ಬಿಟ್ಟು*
*ಶಾಲೆ ಶೌಚಾಲಯ* *ಕಟ್ಟೋಣ ಬನ್ನಿ*
ಕವಿ ಇಲ್ಲಿ ಇನ್ನೂ ಉನ್ನತವಾದ ವೈಚಾರಿಕ ಪ್ರಜ್ಞೆಯನ್ನು ತೆರೆದಿಟ್ಟಿದ್ದಾನೆ. ಕಾಣದ ದೇವರಿಗೆ ಹರಕೆ ಹೊರುವ, ಬಲಿಕೊಡುವ ಮೌಢ್ಯತೆಯನ್ನು ತೊರೆದು, ಶಾಲೆಯನ್ನು ಕಟ್ಟೋಣ ಇದರಿಂದ ಅಕ್ಷರ ಸಂಸ್ಕೃತಿ ಬೆಳೆಯುತ್ತದೆ.ಶೌಚಾಲಯ ಕಟ್ಟೋಣ.ಕಾಡು ಕಡಿದು ಹಾಳು ಮಾಡುವುದ ಬಿಟ್ಟು ಗಿಡಗಳನ್ನು ನೆಡೆಸೋಣ ಬನ್ನಿ ಎಂದು ಹೇಳುವಲ್ಲಿ ಪರಿಸರ ಜಾಗೃತಿಯನ್ನು ತರುವ ಪ್ರಯತ್ನವನ್ನು ಗುರುತಿಸಬಹುದು.
ಕೊನೆಯದಾಗಿ ಕವಿ
*ಬನ್ನಿ ಬನ್ನಿ*
*ಎಲ್ಲರೂ ಬನ್ನಿ*
*ಬುದ್ಧ ಬಸವರ* *ಹಾದಿಯಲ್ಲಿ*
*ನಡೆಯೋಣ ಬನ್ನಿ* ಎಂದು ಕರೆ ಕೊಡುವ ಕವಿಯ ಕಳಕಳಿ, ಸುಂದರ ಸಮಾಜ ನಿರ್ಮಾಣ ಮಾಡುವುದೇ ಆಗಿದೆ.
ಕವಿ ಗುರುಬಸವ ಸಿಂಧೂರ ಅವರು ಬಿಂಬ ಕೃತಿಯಲ್ಲಿ ಸಾಮಾಜಿಕ ವ್ಯವಸ್ಥೆ, ರಾಜಕೀಯ ದೊಂಬರಾಟ, ಜಾಗೃತನಾಗದ ಸತ್ಪ್ರಜೆ, ಮಹಿಳೆಯ ಸ್ಥಿತಿಗತಿಗಳನ್ನು ಕುರಿತು ಮನನೊಂದು ಕಟುಕಿ ವ್ಯಂಗ್ಯವಾಗಿ, ವಿಡಂಬನಾತ್ಮಕವಾಗಿ ಬರೆಯುವುದರ ಮೂಲಕ ತಮ್ಮ ಮನದ ಭಾವಗಳನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ.ಕವಿಯ ಕನಸುಗಳು ಸಾಕಾರಗೊಳ್ಳಲಿ.ಇವರಿಂದ ಇನ್ನೂ ಉತ್ತಮ ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.

ಅರುಣಾ ನರೇಂದ್ರ ಕೊಪ್ಪಳ
