
ಮುರಡಿ ಗ್ರಾಮ ಪಂಚಾಯತಿ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ: ಜಿಪಂ ಯೋಜನಾ ನಿರ್ದೇಶಕರು ಸಲಹೆ
ನರೇಗಾ ಕೂಲಿಕಾರರಿಗೆ ನಿರಂತರ ಕೆಲಸ: ಎಸ್.ಎಂ.ಕಾಂಬಳೆ
ಯಲಬುರ್ಗಾ: ಮಹಾತ್ಮ ಗಾಂಧಿ ನರೇಗಾ ಯೋಜನೆಯಂತೆಯೇ ವಿಬಿಜಿ ರಾಮ್ ಜಿ ಕೂಡ ಅಕುಶಲ ಕೂಲಿಕಾರರಿಗೆ ನಿರಂತರ ಕೆಲಸ ಇರುವುದರಿಂದ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರಾದ ಎಸ್.ಎಂ ಕಾಂಬಳೆ ಅವರು ಭರವಸೆ ನೀಡಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಕೂಲಿಕಾರರನ್ನುದ್ದೇಶಿಸಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಸರಿಯಾಗಿ ಕೆಲಸ ನಿರ್ವಹಿಸಿ ವೇತನ ಪಡೆಯಬಹುದು. ಕೆಲಸದ ವಿಷಯದಲ್ಲಿ ಯಾವುದೇ ಅಡೆ ತಡೆ ಇರುವುದಿಲ್ಲ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಅಕುಶಲಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಿ, ದೀರ್ಘ ಕಾಲ ಬಾಳಿಕೆ ಬರುವ ಸಮುದಾಯ ಸ್ವತ್ತುಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜೊತೆಯಾಗಿ ನಿಂತಿರುವ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಳಿಕ ಮುರಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಅಡುಗೆ ಕೋಣೆ ಕಾಮಗಾರಿ ಪರಿಶೀಲಿಸಿದರು. ನಂತರ ಮುರಡಿಯ ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಎಫ್ ಎಸ್ ಟಿ ಘಟಕಗಳನ್ನು ಪರಿಶೀಲಿಸಿ ಘಟಕಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಪಿಡಿಒರವರಿಗೆ ಸಲಹೆ ನೀಡಿದರು. ಘಟಕದಲ್ಲಿ ತ್ಯಾಜ್ಯ ವಿಂಗಡಣೆಯಾಗಬೇಕು. ಮುಂದಿನ ದಿನಗಳಲ್ಲಿ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಹನಮಂತಗೌಡ ಪೊಲೀಸ್ ಪಾಟೀಲ್, ಜಿಪಂನ ಸ್ವಚ್ಛ ಭಾರತ ಮಿಷನ್ ಯೋಜನೆಯ ಅಧಿಕಾರಿಗಳಾದ ರಾಮಣ್ಣ ಬಂಡಿಹಾಳ, ಶಿವಕುಮಾರ, ಪಿಡಿಒರಾದ ಪುಷ್ಪಲತಾ, ತಾಂತ್ರಿಕ ಸಹಾಯಕರಾದ ವಿಜಯ ಬಳಿಗಾರ, ಕಂಪ್ಯೂಟರ್ ಆಪರೇಟರ್ ರಮೇಶ ಹಳ್ಳಿ, ಸಮುದಾಯ ತಾಂತ್ರಿಕ ಸಹಾಯಕ ಬಸೆಟ್ಟೆಪ್ಪ ಅಂಗಡಿ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.
