ಪಿಎಂಎಸ್ ವೈಎಂ ಯೋಜನೆ ಸದುಪಯೋಗ ಪಡೆದು ಪ್ರತಿತಿಂಗಳ 3000 ಪಿಂಚಣಿ ಪಡೆಯಬಹುದು
ಯಲಬುರ್ಗಾ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಎನ್ನುವುದು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಸ್ವಯಂಪ್ರೇರಿತ ಮತ್ತು ಕೊಡುಗೆ ಆಧಾರಿತ ಪಿಂಚಣಿ ಯೋಜನೆಯಾಗಿದ್ದು, ಈ ಯೋಜನೆಯಡಿ 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು 3,000 ಖಚಿತವಾದ ಪಿಂಚಣಿ ದೊರೆಯುತ್ತದೆ ಎಂದು ತಾಲೂಕು ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ ತಿಳಿಸಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮ ಪಂಚಾಯತಿಯ ಹಗೇದಾಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡುತ್ತಿರುವ ನಾಲಾ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ರೋಜಗಾರ್ ದಿನಾಚರಣೆ ಹಾಗೂ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ನೊಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಸಂಘಟಿತ ವಲಯದ ಕಾರ್ಮಿಕರು ಎಂದರೆ ಬೀದಿ ಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ಮನೆ ಕೆಲಸದವರು ಹಾಗೂ ನರೇಗಾ ಕೂಲಿಕಾರರು ಸೇರಿದಂತೆ ವಿವಿಧ ರೀತಿಯ ಕಾರ್ಮಿಕರು 18 ರಿಂದ 40 ವರ್ಷಗಳ ಒಳಗಿರಬೇಕು. ಮಾಸಿಕ ಆದಾಯ ₹15,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಅರ್ಜಿದಾರರು ಆದಾಯ ತೆರಿಗೆ ಪಾವತಿದಾರರಾಗಿರಬಾರದು ಮತ್ತು EPFO, ESIC ಅಥವಾ NPS ಸದಸ್ಯರಾಗಿರಬಾರದು ಎಂದು ತಿಳಿಸಿದರು.
ಯೋಜನೆಯಡಿ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ಸಿಗುತ್ತದೆ. ಕೂಲಿಕಾರರು ಪ್ರತಿ ತಿಂಗಳು ವಯಸ್ಸಿಗೆ ತಕ್ಕಂತೆ ಎಷ್ಟು ಹಣ ಪಾವತಿಸುತ್ತೀರಿ, ಅಷ್ಟೇ ಮೊತ್ತವನ್ನು ಕೇಂದ್ರ ಸರ್ಕಾರವು ನಿಮ್ಮ ಪಿಂಚಣಿ ಖಾತೆಗೆ ಜಮೆ ಮಾಡುತ್ತದೆ. ಫಲಾನುಭವಿಯ ಮರಣದ ನಂತರ, ಅವರ ಸಂಗಾತಿಗೆ (ಪತಿ ಅಥವಾ ಪತ್ನಿ) ಪಿಂಚಣಿಯ 50% (₹1,500) ಮೊತ್ತವನ್ನು ಕುಟುಂಬ ಪಿಂಚಣಿಯಾಗಿ ನೀಡಲಾಗುತ್ತದೆ. ನಿಮ್ಮ ವಯಸ್ಸಿಗೆ ಅನುಗುಣವಾಗಿ ತಿಂಗಳಿಗೆ ₹55 ರಿಂದ ₹200 ವರೆಗೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ಉಚಿತ ಸಹಾಯವಾಣಿ ಸಂಖ್ಯೆ 1800 2676 888 ಗೆ ಕರೆ ಮಾಡಬಹುದು. Pmjby ಹಾಗೂ pmsby ಯೋಜನೆಯ ವಿಮಾವನ್ನು ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮುದಾಯ ತಾಂತ್ರಿಕ ಸಹಾಯಕರಾದ ಶರೀಪ್ ಸುಂಕದ ಮಾತನಾಡಿ, ಎರಡುಬಾರಿ ಎನ್ಎಂಎಂಎಸ್ ಹಾಜರಾತಿ ಕಡ್ಡಾಯ, ಮೆಜರ್ ಮೆಂಟ್ ಗೆ ತಕ್ಕಂತೆ ಕೂಲಿ ಕೆಲಸದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಕಾಯಕ ಮಿತ್ರರಾದ ಶರಣಮ್ಮ, ಕಾಯಕ ಬಂಧುಗಳು, 176 ಕೂಲಿಕಾರರು ಹಾಜರಿದ್ದರು.
