*ಕೂಲಿಕಾರರು ದುಡಿಯೋಣ ಬಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಿ: ನೀಲಗಂಗಾ ಬಬಲಾದ*
ಯಲಬುರ್ಗಾ ನರೇಗಾದಡಿ ಬೇಸಿಗೆಯ ಎರಡು ತಿಂಗಳು ನಿರಂತರವಾಗಿ ಕೆಲಸ ಕೊಡಲು ದುಡಿಯೋಣ ಬಾ ಅಭಿಯಾನ ಮಾಡುತ್ತಿದ್ದು, ಎಲ್ಲ ಅಕುಶಲ ಕೂಲಿಕಾರರು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ನೀಲಗಂಗಾ ಬಬಲಾದ ಹೇಳಿದರು.
ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದಲ್ಲಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿಯ ಎನ್ ಎಂಎಂಎಸ್ ಹಾಜರಾತಿ ಪರಿಶೀಲಿಸಿ ಅವರು ಮಾತನಾಡಿದರು.
ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ ಆರ್ಥಿಕವಾಗಿ ಸಬಲರಾಗಬೇಕಿದೆ. ಸರ್ಕಾರದಿಂದ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ನೀಡುತ್ತಿವೆ. ಸಾಕಷ್ಟು ಅವಕಾಶಗಳನ್ನು ಕಲ್ಪಿಸುತ್ತಿದ್ದು, ಗ್ರಾಮ ಪಂಚಾಯತಿಗಳು ಮಹಿಳಾ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಾ ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿವೆ ಎಂದು ಹೇಳಿದರು.
ಕೂಲಿಕಾರರು ಕೆಲಸ ಮಾಡುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಬಿಸಿಲಿನ ವೇಳೆ ಹೊರಗಡೆ ಬರಬಾರದು. ಹೆಚ್ಚು ನೀರು ಕುಡಿಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಕಂಪ್ಯೂಟರ್ ಆಪರೇಟರ್ ಶರಣಪ್ಪ, ಕಾಯಕ ಬಂಧುಗಳು, ಕೂಲಿಕಾರರು, ಹಾಜರಿದ್ದರು.
