*ತುಮ್ಮರಗುದ್ದಿ ಗ್ರಾಪಂನ ಮಾರನಾಳ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ*

*ನರೇಗಾ ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ಮೂಲ ಸೌಕರ್ಯಕ್ಕೆ ಅದ್ಯತೆ: ಶ್ರೀಕಾಂತ ಕೂಕನಪಳ್ಳಿ*
ಯಲಬುರ್ಗಾ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರನಾಳ ಗ್ರಾಮದ ಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಳ್ಳಲಾದ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ನರೇಗಾ ಯೋಜನೆಯ ಕೂಲಿಕಾರರು ಗೂಳೆ ಹೋಗದಂತೆ ತಡೆದು ಕೆಲಸ ನೀಡಿದ್ದು, ಕೆಲಸದ ಸ್ಥಳದಲ್ಲಿ ಕುಡಿಯುವ ನೀರು ಮತ್ತು ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಗ್ರಾಮ ಪಂಚಾಯತಿ ಕಾರ್ಯದರ್ಶಿ ಶ್ರೀಕಾಂತ ಕೂಕನಪಳ್ಳಿ ತಿಳಿಸಿದರು.
ಗ್ರಾಮದ 350ಕ್ಕೂ ಹೆಚ್ಚು ಜನ ಅಕುಶಲ ಕೂಲಿಕಾರರ ಎನ್ ಎಂಆರ್ ತೆಗೆದು ಕೆಲಸದ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ 209 ಜನರ ಎನ್ಎಂಎಂಎಸ್ ಹಾಜರಾತಿ ಆಗಿದ್ದು, ಇನ್ನು ಕೆಲವು ಜನರ ಹಾಜರಾತಿ ಆಗದೇ ಇರುವ ಕಾರಣ ಅಪ್ ಡೇಟ್ ಮಾಡಿಸಿಕೊಂಡು ಬರಲು ತಿಳಿಸಿದೆ. ಇನ್ನು ಆರು ದಿನಗಳ ನಿರಂತರ ಕೆಲಸ ನೀಡಲಾಗಿದೆ. ಈಗಾಗಲೇ ಒಂದು ಟ್ಯಾಂಕರ್ ನೀರು ಕೊಡಲಾಗಿದ್ದು, ಮತ್ತೊಂದು ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ ಮಾತನಾಡಿ, ನರೇಗಾ ಕೂಲಿಕಾರರು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಎನ್ನುವುದು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಸ್ವಯಂಪ್ರೇರಿತ ಮತ್ತು ಕೊಡುಗೆ ಆಧಾರಿತ ಪಿಂಚಣಿ ಯೋಜನೆಯಾಗಿದ್ದು, ಈ ಯೋಜನೆಯಡಿ 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು 3,000 ಖಚಿತವಾದ ಪಿಂಚಣಿ ದೊರೆಯುತ್ತದೆ.
ಅಸಂಘಟಿತ ವಲಯದ ಕಾರ್ಮಿಕರು ಎಂದರೆ ಬೀದಿ ಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ಮನೆ ಕೆಲಸದವರು ಹಾಗೂ ನರೇಗಾ ಕೂಲಿಕಾರರು ಸೇರಿದಂತೆ ವಿವಿಧ ರೀತಿಯ ಕಾರ್ಮಿಕರು 18 ರಿಂದ 40 ವರ್ಷಗಳ ಒಳಗಿರಬೇಕು. ಮಾಸಿಕ ಆದಾಯ ₹15,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಅರ್ಜಿದಾರರು ಆದಾಯ ತೆರಿಗೆ ಪಾವತಿದಾರರಾಗಿರಬಾರದು ಮತ್ತು EPFO, ESIC ಅಥವಾ NPS ಸದಸ್ಯರಾಗಿರಬಾರದು ಎಂದು ತಿಳಿಸಿದರು.

ಯೋಜನೆಯಡಿ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ಸಿಗುತ್ತದೆ. ಕೂಲಿಕಾರರು ಪ್ರತಿ ತಿಂಗಳು ವಯಸ್ಸಿಗೆ ತಕ್ಕಂತೆ ಎಷ್ಟು ಹಣ ಪಾವತಿಸುತ್ತೀರಿ, ಅಷ್ಟೇ ಮೊತ್ತವನ್ನು ಕೇಂದ್ರ ಸರ್ಕಾರವು ನಿಮ್ಮ ಪಿಂಚಣಿ ಖಾತೆಗೆ ಜಮೆ ಮಾಡುತ್ತದೆ. ಫಲಾನುಭವಿಯ ಮರಣದ ನಂತರ, ಅವರ ಸಂಗಾತಿಗೆ (ಪತಿ ಅಥವಾ ಪತ್ನಿ) ಪಿಂಚಣಿಯ 50% (₹1,500) ಮೊತ್ತವನ್ನು ಕುಟುಂಬ ಪಿಂಚಣಿಯಾಗಿ ನೀಡಲಾಗುತ್ತದೆ. ನಿಮ್ಮ ವಯಸ್ಸಿಗೆ ಅನುಗುಣವಾಗಿ ತಿಂಗಳಿಗೆ ₹55 ರಿಂದ ₹200 ವರೆಗೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ಉಚಿತ ಸಹಾಯವಾಣಿ ಸಂಖ್ಯೆ 1800 2676 888 ಗೆ ಕರೆ ಮಾಡಬಹುದೆಂದು ತಿಳಿಸಿದರು.
*ತಾಂತ್ರಿಕ ಸಹಾಯಕರಾದ ವಿಜಯ್ ಬಂಡಿ ಮಾತನಾಡಿ*
ನರೇಗಾ ಕೆಲಸ ಮಾಡುವ ಕೂಲಿಕಾರರು, ಸರಿಯಾಗಿ ಕಟ್ಟೆಗಳನ್ನು ಕಡಿಯಬೇಕು. ಮಳೆ ಬಂದಾಗ ಮಳೆನೀರು ಅದರಲ್ಲಿ ಸಂಗ್ರಹವಾಗಿ ಭೂಮಿಯಲ್ಲಿ ಇಂಗಬೇಕು. ಇದರಿಂದ ಅಂತರ್ಜಲ ವೃದ್ದಿಯಾಗುವುದು. ಅಳತೆಗೆ ತಕ್ಕಂತೆ ವೇತನ ನೀಡಲಾಗುವುದು ಎಂದರು.
ಸದರಿ ಕಾಮಗಾರಿ ಸ್ಥಳದಲ್ಲಿ NMMS ಫೇಸ್ ಅಥೆಂಟಿಕೇಶನ್ ಆಧಾರಿತವಾಗಿ ಹಾಜರಾತಿ ಹಾಕಲಾಗಿದೆ. ಕೂಲಿಕಾರ್ಮಿಕರ ಮುಖ ಗುರುತಿಸುವಿಕೆ (Facial Recognition) ತಂತ್ರಜ್ಞಾನ ಬಳಸಿ ಕಾರ್ಮಿಕರ ನಿಖರವಾದ ಹಾಜರಾತಿಯನ್ನು ಪಡೆಯಲಾಯಿತು.
ಈ ಸಂದರ್ಭದಲ್ಲಿ ಗಣಕಯಂತ್ರ ನಿರ್ವಾಹಕರಾದ ರಮೇಶ, ಗ್ರಾಮ ಕಾಯಕ ಮಿತ್ರರಾದ ಶಿಲ್ಪಾ ಡೊಳ್ಳಿನ್, ಕಾಯಕ ಬಂಧುಗಳು ನೂರಾರು ಜನ ಕೂಲಿಕಾರರು ಹಾಜರಿದ್ದರು.
