ಮಂಡ್ಯ : ಕಲೆ, ಶಿಕ್ಷಣ, ಪತ್ರಿಕೋದ್ಯಮ ಹಾಗೂ ಸಮಾಜ ಸೇವೆ ಕ್ಷೇತ್ರಗಳಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಆನಂದ್ ಸಿ ತಿರುಮಲ ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯದ ನಗರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ “ಪ್ರಥಮ ಮಹಿಳಾ ಕನ್ನಡ ಅಕ್ಷರ ಜಾತ್ರೆ” ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಡಾ. ಜೀಶಂಪ ಕನ್ನಡ ಸಾಹಿತ್ಯ ವೇದಿಕೆ, ಕನ್ನಡಬಡಿ ದಿನಪತ್ರಿಕೆ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್, ಮಂಡ್ಯ ಇವರ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಆನಂದ್ ಸಿ ತಿರುಮಲ ಅವರನ್ನು ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಸ್. ಕೃಷ್ಣ ಸ್ವರ್ಣಸಂದ್ರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್. ಯೋಗಾನಂದ ಹಾಗೂ ಮೈಸೂರು ಜಿಲ್ಲಾ ಪ್ರಭಾರಿ ಇ.ಸಿ. ನಿಂಗರಾಜ್ ಗೌಡ ಭಾಗವಹಿಸಿ ಮಾತನಾಡಿದರು.
ಆನಂದ್ ಸಿ ತಿರುಮಲ ಅವರು ಸಮಾಜಮುಖಿ ಸೇವೆ, ಪತ್ರಿಕೋದ್ಯಮ, ಶಿಕ್ಷಣ, ಯುವಜನರ ಮಾರ್ಗದರ್ಶನ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಗಣನೆಗೆ ತೆಗೆದುಕೊಂಡು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು ಎಂದು ಗಣ್ಯರು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಆನಂದ್ ಸಿ ತಿರುಮಲ, “ಈ ಗೌರವ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜಮುಖಿ ಕಾರ್ಯಗಳು, ಯುವಜನರ ಸಬಲೀಕರಣ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸಲು ಈ ಪ್ರಶಸ್ತಿ ಪ್ರೇರಣೆ ನೀಡಿದೆ. ಈ ಗೌರವಕ್ಕೆ ಕಾರಣರಾದ ಎಲ್ಲ ಸಂಘಟಕರಿಗೆ ಹಾಗೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳಿದರು.
ಕಾರ್ಯಕ್ರಮದ ಸಮಾರಂಭದಲ್ಲಿ ಯುವಮುಖಂಡ .ಯೋಗಾನಂದ, ಅಕ್ಷರ ಜಾತ್ರೆಯ ಸಮ್ಮೇಳನಾಧ್ಯಕ್ಷೆ ಹಾಗೂ ಕವಿಯತ್ರಿ ಬಿ.ಆರ್. ಉಮಾ, ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ,ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ಆನಂದ್ ಸಿ ತಿರುಮಲ, ಸಾಹಿತಿ ನವೀದ್ ಮುಲ್ಲಾ, ಆಧ್ಯಾತ್ಮ ಚಿಂತಕಿ ಡಾ.ಪೂರ್ಣಿಮಾ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಪದಾಧಿಕಾರಿಗಳಾದ ಮಂಗಲ ಶಿವಣ್ಣ, ನಾಗೇಶ್ ರಾಗಿಮುದ್ದನಹಳ್ಳಿ, ಎಲ್ಲರೊಳ ಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ವಿನಯ್‌ಕುಮಾರ್, ನಾರಾಯಣಸ್ವಾಮಿ, ಹೇಮಾ ಉಪಸ್ಥಿತರಿದ್ದರು.
ಸಾಹಿತ್ಯಾಸಕ್ತರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
