ಕೊಪ್ಪಳ ಸಂವಿಧಾನ ಸಭೆ ಚುನಾವಣೆಯಲ್ಲಿ ಸೋತಿದ್ದ ಡಾ: ಬಿ.ಆರ್. ಅಂಬೇಡ್ಕರ್ ಮುಸ್ಲಿಮ್ ಲೀಗ್ ಬೆಂಬಲದಿಂದ ಗೆಲುವು ಸಾಧಿಸಿದ್ದರು ಎಂದು ಭ್ರಾತೃತ್ವ ಸಮಿತಿಯ ಸಂಚಾಲಕ ಎಸ್.ಎ.ಗಫಾರ್ ಹೇಳಿದರು.
ನಗರದ ಸಾಲಾರ್ ಜಂಗ್ ರಸ್ತೆಯಲ್ಲಿರುವ ಡಾ: ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಭ್ರಾತೃತ್ವ ಸಮಿತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿ ಅಂಗವಾಗಿ ಎಸ್.ಎ.ಗಫಾರ್ ಅವರು ಮುಂದುವರೆದು ಮಾತನಾಡಿ ಸಂವಿಧಾನ ಸಭೆ ಚುನಾವಣೆಯಲ್ಲಿ ಬಾಂಬೆ ಪ್ರಾಂತ್ಯದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದರಿಂದ ಡಾ: ಬಿ.ಆರ್.ಅಂಬೇಡ್ಕರ್ ಅವರು ಸೋತಿದ್ದರು. ಬಂಗಾಳದಲ್ಲಿ ಮುಸ್ಲಿಮ್ ಲೀಗ್ ಮತ್ತು ದಲಿತ ಮುಖಂಡ ಜೋಗೇಂದ್ರ ನಾಥ್ ಮಂಡಲ್ ಅವರ ಸಂಪೂರ್ಣ ಬೆಂಬಲದಿಂದ ಸಂವಿಧಾನ ಸಭೆಗೆ ಆಯ್ಕೆ ಆದರು. ನಂತರ ಪಾಕಿಸ್ತಾನ ವಿಭಜನೆಯಾದಾಗ ಬಂಗಾಳದಿಂದ ಆಯ್ಕೆಯಾಗಿದ್ದ ಸ್ಥಾನ ಕಳೆದುಕೊಂಡರು. ಬಾಂಬೆ ಪ್ರಾಂತ್ಯದಿಂದ ಸ್ಪರ್ಧಿಸಿದಾಗ ಕಾಂಗ್ರೆಸ್.ಮುಸ್ಲಿಮ್ ಲೀಗ್ ಸೇರಿದಂತೆ ಎಲ್ಲಾ ಪಕ್ಷಗಳು ಬೆಂಬಲಿಸಿ ಅವಿರೋಧ ಆಯ್ಕೆ ಮಾಡಿದರು.ಶೋಷಿತ ಸಮಾಜಗಳು. ತುಳಿತಕ್ಕೊಳಗಾದ ಸಮುದಾಯಗಳ ಜನರ ಏಳಿಗೆಗೆ ಬರೆದಿರುವ ಡಾ: ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಎಲ್ಲರೂ ಓದಿ ಅರಿತುಕೊಳ್ಳಬೇಕು ಎಂದು ನುಡಿದರು.
ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಎಂ. ಅಪ್ಪಣವರ್ ಮಾತನಾಡಿ ದೇಶದ ಜನರಲ್ಲಿ ಸಮಾನತೆ ಯಲ್ಲಿ ತಾರತಮ್ಯ ಇನ್ನೂ ಇದೆ. ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ನಾವುಗಳು ಮನುಸ್ಮೃತಿ ಮನುವಾದ ಇವುಗಳನ್ನು ಬದಲಾಯಿಸುವ ಕಾಲದಲ್ಲಿ ಇಲ್ಲ.ಅದಕ್ಕೆ ಬದಲಾಗಿ ನಮ್ಮ ಮನಸನ್ನು ಬದಲಾಯಿಸಿಕೊಂಡು ನಮ್ಮ ನೆರೆಯವರನ್ನು ಸಮಾನತೆಯಿಂದ ನೋಡುವುದನ್ನು ಕಲಿತಾಗ ಸಂವಿಧಾನಕ್ಕೆ ಗೌರವ ಕೊಟ್ಟ ಹಾಗೆ ಎಂದು ಹೇಳಿದರು.
ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಎಂ.ಹೊಸಮನಿ ಮಾತನಾಡಿ ಡಾ: ಬಿ.ಆರ್. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿ ಜನಾಂಗಕ್ಕೂ ಅನುಕೂಲ ವಾಗುವಂತೆ ಸಂವಿಧಾನ ಬರೆದಿದ್ದಾರೆ. ಸಂವಿಧಾನ ತಿಳಿಯದೆ ಇರುವವರು ಏನೇನು ಹೇಳುತ್ತಿದ್ದಾರೆ.ಸಂವಿಧಾನ ಎಲ್ಲರೂ ಓದಿ ಅದರ ಮಹತ್ವವನ್ನು ತಿಳಿಯಬೇಕು ಎಂದು ಕರೆ ನೀಡಿದರು.
ಹಿರಿಯ ಮುಖಂಡ ಗಾಳೆಪ್ಪ ಕಡೆಮನಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಎಲ್ಲರೂ ನಡೆದುಕೊಳ್ಳಬೇಕು. ಅಂದಾಗ ಮಾತ್ರ ಸಮಾಧಾನ ನೆಮ್ಮದಿಯ ಬದುಕನ್ನು ನಡೆಸಿಕೊಂಡು ಹೋಗಲು ಸಾಧ್ಯವಿದೆ ಎಂದು ಹೇಳಿದರು.
ಅಹಿಂದ ಚಳುವಳಿಯ ಸಹ ಸಂಚಾಲಕ ಮುತ್ತುರಾಜ್ ಚನ್ನದಾಸರ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಜಾತಿ ಧರ್ಮ ಮನೆಗೆ ಸೀಮಿತವಾಗದೆ ಇಡೀ ದೇಶದ ಸಕಲ ಮನುಕುಲಕ್ಕೆ ಸಂವಿಧಾನದ ಪ್ರತಿಯೊಂದು ಅಂಶ ಮುಟ್ಟಲಿಕ್ಕೆ ಸಹಾಯವಾಗಲೆಂದು ಮಹಾದಾಸೆಯನ್ನು ಇಟ್ಟುಕೊಂಡು ಸಂವಿಧಾನ ಬರೆದರು. ನಾವು ಸಮಾನತೆ ಮತ್ತು ಭ್ರಾತೃತ್ವಕ್ಕಾಗಿ ಹೋರಾಟ ಮಾಡಿದಾಗ ಮಾತ್ರ ಈ ಸಂವಿಧಾನಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮೌಲಾ ಹುಸೇನ್ ಹಣಗಿ.ಶಿವಣ್ಣ ಹಾದಿಮನಿ.ಮೊಹಮ್ಮದ್ ಗೌಸ್ ನೀಲಿ.ಬಸವರಾಜ್. ಪರಶುರಾಮ ರಾಜಪ್ಪ ಚನ್ನದಾಸರ.ಮಖಬೂಲ್ ರಾಯಚೂರು ಮುಂತಾದವರು ಭಾಗವಹಿಸಿದ್ದರು.ಹಂಚಾಳಪ್ಪ ಇಟಗಿ ಹ್ಯಾಟಿ ಮುಂಡರಗಿ ಕೊನೆಯಲ್ಲಿ ವಂದಿಸಿದರು.
