ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆರು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದ ಸಿಎಂ, ಗುರುವಾರ ಉನ್ನತಾಧಿಕಾರಿಗಳ ಮಹತ್ವದ ಸಭೆ ನಡೆಸಿ, ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆದಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಮ್ಮ ಸರ್ಕಾರದಲ್ಲಿ ಜಾತಿ, ಧರ್ಮ ಸೇರಿದಂತೆ ಯಾವುದೇ ರೀತಿಯ ಬಾಹ್ಯ ಪ್ರಭಾವಗಳಿಗೆ ಆಸ್ಪದವಿಲ್ಲ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ, ತಮಗೆ ನೀಡಿರುವ ಮುಕ್ತ ಸ್ವಾತಂತ್ರ್ಯವನ್ನು ಬಳಸಿಕೊಂಡು ಜನಪರ ಕೆಲಸ ಮಾಡಬೇಕು" ಎಂದರು.
ಒತ್ತಡಗಳಿಗೆ ಭಯ ಬೇಡ: ಶಾಸಕರು, ಸಚಿವರು ಸೇರಿದಂತೆ ಯಾರೇ ಒತ್ತಡ ಹೇರಿದರೂ ಅದಕ್ಕೆ ಮಣಿಯದೆ ಹಾಗೂ ಭಯ ಪಡದೇ ನಿಯಮಾನುಸಾರ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ನೂತನ ಸಿಎಂ ಧೈರ್ಯ ತುಂಬಿದ್ದಾರೆ.
ತಳ ಮಟ್ಟಕ್ಕೆ ತೆರಳಿ ಕೆಲಸ ಮಾಡಿ: ಉನ್ನತ ಹಾಗೂ ಜಿಲ್ಲಾ,ತಾಲೂಕು ಮಟ್ಟದ ಅಧಿಕಾರಿಗಳು ಕೇವಲ ಕಚೇರಿಗಳಿಗೆ ಸೀಮಿತವಾಗಬಾರದು. ತಾಲೂಕು ಮತ್ತು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಎಚ್ಚರಿಸಿದ್ದಾರೆ.
ಬಾಕಿ ಕೆಲಸಗಳ ಪಟ್ಟಿಗೆ 25 ದಿನ ಗಡುವು: ಎಲ್ಲಾ ಇಲಾಖೆಗಳಲ್ಲಿ ಪ್ರಸ್ತುತ ನೆನೆಗುದಿಗೆ ಬಿದ್ದಿರುವ ಅಥವಾ ಬಾಕಿ ಉಳಿದಿರುವ ಎಲ್ಲಾ ಕೆಲಸಗಳ ಸಂಪೂರ್ಣ ಪಟ್ಟಿಯನ್ನು ಮುಂದಿನ 25 ದಿನಗಳೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಗಡುವು ನೀಡಿದ್ದಾರೆ.
ಇನ್ನು ನೂತನ ಸಿಎಂ ಅವರ ಈ ದಿಟ್ಟ ನಡೆಗೆ ಸಾರ್ವಜನಿಕ ವಲಯದಲ್ಲಿ ಭರವಸೆ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ಆಡಳಿತ ಯಂತ್ರದಲ್ಲಿ ಎಂತಹ ಬದಲಾವಣೆಗಳನ್ನು ತರಲಿದೆ ಎಂಬುದನ್ನು ಕಾದು ನೋಡಬೇಕಿದೆ.
