
ಬೆಂಗಳೂರು: ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳನ್ನು ಉಳಿಸುವ ನಿಟ್ಟಿನಲ್ಲಿ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು, ಕೃತಕ ಗೂಡುಗಳು ಗುಬ್ಬಚ್ಚಿಗಳಿಗೆ ಹೊಸ ಆಶ್ರಯ ತಾಣವಾಗಿವೆ.

ನಗರ ಪ್ರದೇಶಗಳಲ್ಲಿ ಹೆಂಚಿನ ಮನೆಗಳು ಮಾಯವಾಗಿ, ಟೆರೇಸ್ ಮಾದರಿಯ ಕಟ್ಟಡಗಳು ಹೆಚ್ಚಾದಂತೆ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಸೂಕ್ತ ಸ್ಥಳ ಸಿಗುವುದು ಕಷ್ಟವಾಗಿದೆ. ಈ ಕಾರಣದಿಂದಾಗಿ ಗುಬ್ಬಚ್ಚಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಇನ್ಫಿವರ್ಲ್ಡ್’ ಎಂಬ ಎನ್‌ಜಿಒ ಸಂಸ್ಥೆಯು ಗುಬ್ಬಚ್ಚಿಗಳ ಉಳಿವಿಗೆ ಮಹತ್ವದ ಪ್ರಯತ್ನಕ್ಕೆ ಕೈಹಾಕಿದೆ.


ಈ ಸಂಸ್ಥೆಯು ಕೃತಕ ಗೂಡುಗಳನ್ನು ನಿರ್ಮಿಸಿ ದಕ್ಷಿಣ ವಿಭಾಗದ ಬನಶಂಕರಿ ಠಾಣೆ, ಮಹಿಳಾ ಪೊಲೀಸ್ ಠಾಣೆ ಸೇರಿದಂತೆ ಹಲವು ಪೊಲೀಸ್ ಠಾಣೆಗಳ ಆವರಣದಲ್ಲಿ ನೇತುಹಾಕಿದೆ. ಈ ಕೃತಕ ಗೂಡುಗಳಲ್ಲಿ ಗುಬ್ಬಚ್ಚಿಗಳು ಬಂದು ವಾಸಿಸಲು ಪ್ರಾರಂಭಿಸಿರುವುದು ಈ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ. ಇದು ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಪ್ರಭೇದವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಇಡಲಾದ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.

