ಕುಷ್ಟಗಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಕಂದಕೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು, ಅವುಗಳ ಸಂರಕ್ಷಣೆಯ ಪ್ರತಿಜ್ಞೆ ಕೈಗೊಂಡರು. ಅಲ್ಲದೆ, ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಪರಿಸರ ಸ್ವಚ್ಛತೆ ಮತ್ತು ಸಂರಕ್ಷಣೆಯ ಮಹತ್ವವನ್ನು ಸಾರಿದರು. ದೈಹಿಕ ಶಿಕ್ಷಣ ಶಿಕ್ಷಕ ಮಹಾಂತೇಶ ಉಳ್ಳಾಗಡ್ಡಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಶಿಕ್ಷಕ ಬಸವರಾಜ ಗುರಿಕಾರ್, “ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದೆ. ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮರಗಳ ಸಂರಕ್ಷಣೆ ಮೂಲಕ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ” ಎಂದು ಹೇಳಿದರು.
ಸಹಶಿಕ್ಷಕರಾದ ಕಿಶನರಾವ್ ಕುಲಕರ್ಣಿ, ಶಿಲ್ಪಾ ಅಂಗಡಿ, ಶ್ರೀದೇವಿ ಕಟ್ಟಿಮನಿ ಹಾಗೂ ಶಿವಲೀಲಾ ಮೇದಿನಾಪೂರ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರಿನ ಸಂರಕ್ಷಣೆ ಮತ್ತು ಹಸಿರು ಪರಿಸರ ನಿರ್ಮಾಣದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ ಸಂರಕ್ಷಣೆಯ ಕುರಿತು ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳು ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸುವ ಸಂಕಲ್ಪ ಮಾಡಿದರು. ಶಾಲಾ ಆವರಣದಲ್ಲಿ ನೆಡಲಾದ ಸಸಿಗಳ ಆರೈಕೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ವಹಿಸಲಾಯಿತು.
