ಗಂಗಾವತಿ ಪರೀಕ್ಷೆಯಲ್ಲಿ ಶೇ.95.8 ಅಂಕಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಖುಷಿ ಆನಂದ್ ಅಕ್ಕಿಯನ್ನು ಇಸ್ಲಾಂಪೂರಿನ ಭಾವೈಕ್ಯತಾ ಸಮಿತಿಯ ಮುಸ್ಲಿಂ ಸದಸ್ಯರು
ಎಸ್‌ಎಸ್‌ಎಲ್‌ಸಿ (ಐಸಿಎಸ್‌ಇ) ಅಕ್ಕಿಯವರ ನಿವಾಸದಲ್ಲಿ ಸನ್ಮಾನಿಸಿದರು.ಉದ್ಯಮಿ ಅಕ್ಕಿ ಆನಂದ ಅವರ ಪುತ್ರಿಯಾಗಿರುವ ಖುಷಿ ಅಕ್ಕಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಭಾವೈಕ್ಯತಾ ಸಮಿತಿಯ ಮುಖಂಡ ಜುಬೇರ್ ಮತ್ತು ಮುಸ್ಲಿಂ ಸಮುದಾಯದ ಸದಸ್ಯರು ಆಕೆಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಕ್ಕಿ ಆನಂದ, 'ಭಾವೈಕ್ಯತಾ ಸಮಿತಿ ರಚನೆಯ ಉದ್ದೇಶ ಇಂದು ಸಾರ್ಥಕವಾಗಿದೆ. ನಾವು ಬೇರೆಯವರಿಗೆ ನೀಡುವ ಪ್ರೀತಿ ಮತ್ತು ಸಹಕಾರವೇ ನಮಗೆ ಮರಳಿ ಸಿಗುತ್ತದೆ ಎಂಬುದಕ್ಕೆ ಈ ಸನ್ಮಾನ ಸಾಕ್ಷಿಯಾಗಿದೆ' ಎಂದು ಸಂತಸ ವ್ಯಕ್ತಪಡಿಸಿದರು.
ಇಸ್ಲಾಂಪೂರಿನಲ್ಲಿ ತಮ್ಮ ನಿವಾಸದ ಪ್ರದೇಶದಲ್ಲಿ ಪ್ರತಿ ವರ್ಷ ಗಣೇಶೋತ್ಸವವನ್ನು ವಿಜೃಂಭಣೆ ಯಿಂದ ಆಚರಿಸಲಾಗುತ್ತದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಸ್ಥಳೀಯ ಮುಸ್ಲಿಂ ಮಿತ್ರರ ಸಹಕಾರವೇ ಪ್ರಮುಖ ಕಾರಣ ಎಂದು ಅವರು ಹೇಳಿದರು. ಗಣೇಶೋತ್ಸವದ ಅವಧಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸುವುದರಿಂದ ಹಿಡಿದು ಭಕ್ತರಿಗೆ ಊಟದ ವ್ಯವಸ್ಥೆ ಮಾಡುವವರೆಗೂ ಮುಸ್ಲಿಂ ಸಹೋದರರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಆದೇ ಮಾದರಿಯ ವಿಸ್ತರಣೆಗೆ ಈ ಸನ್ಮಾನ ಕಾರ್ಯಕ್ರಮ ನಿದರ್ಶನವಾಗಿದೆ.
ಸಾಧನೆಗೆ ಧರ್ಮದ ಭೇದವಿಲ್ಲ ಎಂಬ ಸಂದೇಶವನ್ನು ಈ ಕಾರ್ಯಕ್ರಮ ರವಾನಿಸಿದೆ. ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಕೋಟ್ರಪ್ಪ ಅಕ್ಕಿ, ಮುಸ್ಲಿಮ ಸಮಾಜದ ದಳಪತಿ ಮಹಮ್ಮದ್ ಬಸಾಪಟ್ಟಣ,ರಫೀಕ್ ಸುಲ್ತಾನ್, ದಾದಫೀರ ಎಸ್.ಸಾಧೀಕ್ ಮನಿಯಾರ್,ಅನೀಫ್,ಗೌಸ್, ಭಾವೈಕ್ಯತಾ ಸಮಿತಿಯ ಸದಸ್ಯರು ಸೇರಿದಂತೆ ಇತರರು ಇದ್ದರು.
