ಗಂಗಾವತಿ: "ನನ್ನ ಪತಿಯ ಬದುಕು ನೀರಿನ ಮೇಲಿನ ಗುಳ್ಳೆಯಂತಾಗಿದೆ. ಎರಡು ಬಾರಿ ಓಪನ್ ಹಾರ್ಟ್ ಸರ್ಜರಿ ಆಗಿರುವ ಒಬ್ಬ ರೋಗಿಯ ಮೇಲೆ ರಾಜಕೀಯ ಬಲ ತೋರಿಸುವುದು ಯಾವ ನ್ಯಾಯ?" – ಇದು ನಗರದ ಲಿಂಗರಾಜ ಕ್ಯಾಂಪ್ ನಿವಾಸಿ ಶ್ರೀಮತಿ ಯಶೋಧ ಅವರ ಕರುಣಾಜನಕ ಪ್ರಶ್ನೆ.
ಗಂಗಾವತಿ ನಗರದ ಶರಣ ಬಸವೇಶ್ವರ ನಗರದ ಪಡಿತರದಾರರಿಗೆ ಕಳೆದ 20 ವರ್ಷಗಳಿಂದ ನ್ಯಾಯಬೆಲೆ ಅಂಗಡಿಯ ಮೂಲಕ ಅತ್ಯಂತ ಪ್ರಾಮಾಣಿಕವಾಗಿ ಧಾನ್ಯ ವಿತರಿಸುತ್ತಿದ್ದ ನಾಗರಾಜ ಎಂಬುವವರು ಇಂದು ಅಧಿಕಾರ ಮತ್ತು ರಾಜಕೀಯದ ಚಕ್ರವ್ಯೂಹಕ್ಕೆ ಸಿಲುಕಿ ಆಸ್ಪತ್ರೆ ಪಾಲಾಗಿದ್ದಾರೆ.

ಹುಡೇಜಾಲಿ ಶರಣಪ್ಪ ಅವರ ಮೇಲೆ ಗಂಭೀರ ಆರೋಪ:
ನಾಗರಾಜ ಅವರು ಎರಡು ದಶಕಗಳಿಂದ ಶರಣ ಬಸವೇಶ್ವರ ನಗರದ ಜನರಿಗೆ ಪಡಿತರ ನೀಡುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ಪದ್ಮಾವತಿ ಸೊಸೈಟಿಯ ಮಾಲೀಕರಾದ ಪದ್ಮಾವತಿ ಅವರ ಪತಿಯಾದ ಹುಡೇಜಾಲಿ ಶರಣಪ್ಪ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ನಾಗರಾಜ ಅವರ ವ್ಯಾಪ್ತಿಯ ಗ್ರಾಹಕರನ್ನು ಬೆದರಿಸಿ, ಒತ್ತಾಯಪೂರ್ವಕವಾಗಿ ತಮ್ಮ ಅಂಗಡಿಯಲ್ಲೇ ಪಡಿತರ ಪಡೆಯುವಂತೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹುಡೇಜಾಲಿ ಶರಣಪ್ಪ ಅವರು ಪ್ರಸ್ತುತ ಕನಕಗಿರಿ ತಾಲೂಕಿನ ಕೃಷಿ ಇಲಾಖೆಯ ಅಧ್ಯಕ್ಷರು ಹಾಗೂ ಮಾಜಿ ನಗರಸಭೆ ಅಧ್ಯಕ್ಷರಾಗಿದ್ದು, ತಮ್ಮ ಬಲದಿಂದ ಬಡ ವಿತರಕನ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಸಂತ್ರಸ್ತ ಕುಟುಂಬ ಅಳಲು ತೋಡಿಕೊಂಡಿದೆ.
ಯಾವುದೇ ನ್ಯಾಯಬೆಲೆ ಅಂಗಡಿ ನಡೆಸಲು ಆಹಾರ ಇಲಾಖೆಯ ಕಠಿಣ ನಿಯಮಗಳಿವೆ. ಬಿಲ್ಡಿಂಗ್ ಅಗ್ರಿಮೆಂಟ್, KEB ಅನುಮತಿ, ತಹಶೀಲ್ದಾರ್ ವರದಿ, ಸ್ಥಳ ಪರಿಶೀಲನೆ ಹಾಗೂ ಮುಖ್ಯವಾಗಿ ಕೊಪ್ಪಳದ ಆಹಾರ ಇಲಾಖೆ GPS ಲೊಕೇಶನ್ ಅನುಮತಿ ಇರಲೇಬೇಕು. ಆದರೆ ಹುಡೇಜಾಲಿ ಶರಣಪ್ಪ ಅವರು ಈ ಯಾವುದೇ ನಿಯಮಗಳನ್ನು ಪಾಲಿಸದೆ, ಕೇವಲ ಭ್ರಷ್ಟಾಚಾರ ಮತ್ತು ಅಧಿಕಾರದ ದರ್ಪದಿಂದ ನಾಗರಾಜ ಅವರಿಗೆ ಸೇರಬೇಕಾದ ಗ್ರಾಹಕರನ್ನು ನಿಯಮಬಾಹಿರವಾಗಿ ಸೆಳೆಯುತ್ತಿದ್ದಾರೆ ಎಂದು ಯಶೋಧ ದೂರಿದ್ದಾರೆ.
ಮಾನಸಿಕವಾಗಿ ಕುಸಿದ ಕುಟುಂಬ:
ಅನ್ಯಾಯದ ವಿರುದ್ಧ ಧ್ವನಿ ಎತ್ತಲಾಗದೆ, ಇತ್ತ ರಾಜಕೀಯ ಬಲಾಢ್ಯರ ದೌರ್ಜನ್ಯವನ್ನು ತಡೆಯಲಾಗದೆ ನಾಗರಾಜ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಪ್ರಸ್ತುತ ಅವರು ನಗರದ ಸಿದ್ದೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. "ನನ್ನ ಪತಿಯನ್ನೇ ನಂಬಿದ ನಾನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳು ಇಂದು ಬೀದಿಪಾಲಾಗುತ್ತಿದ್ದೇವೆ. ರಾಜಕೀಯವಾಗಿ ಬಲಿಷ್ಠರಾಗಿರುವವರು ಬಡವರ ಮೇಲೆ ಈ ಮಟ್ಟದ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ" ಎಂದು ಯಶೋಧ ಕಣ್ಣೀರು ಹಾಕಿದ್ದಾರೆ.
ಈಗಾಗಲೇ ಈ ಕುರಿತು ಗಂಗಾವತಿ ತಹಶೀಲ್ದಾರರಿಗೆ ಮತ್ತು ಕೊಪ್ಪಳ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ಆಹಾರ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಈ ಅಕ್ರಮವನ್ನು ತಡೆಯದಿದ್ದರೆ, ಇಡೀ ಕುಟುಂಬವು ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ಈ ಕುಟುಂಬ ನೀಡಿದೆ.
