
ಗಂಗಾವತಿ ಪೊಲೀಸ್ ಇಲಾಖೆಯಲ್ಲಿ ಖಡಕ್ ಮತ್ತು ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿರುವ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಹರ್ಷ ಪಿ.ಎಸ್ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಯನ್ನು ಘೋಷಿಸಿದೆ.
ಮೇ.06ರಂದು ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯದ ಜನ ಸಹ್ಯಾದ್ರಿ ಆವರಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಹರ್ಷಾ ಅವರಿಗೆ ಪಿಎಚ್‌ಡಿ ಪದವಿ ಪ್ರಧಾನ ಮಾಡಲಾಗುತ್ತಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.
ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದಲ್ಲಿನ ಕ್ಷೇತ್ರ ಸಂಶೋಧನೆಗಾಗಿ ಈ ಪದವಿ ಘೋಷಿಸಲಾಗಿದೆ. ವಿವಿಯ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಡಾ. ವಿಜಯ ಕುಮಾರ್ ಮಾರ್ಗದರ್ಶನದಲ್ಲಿ ಹರ್ಷಾ, ಸಂಪ್ರಬAಧವನ್ನು ವಿವಿಗೆ ಸಲ್ಲಿಸಿದ್ದಾರೆ.
ನಾಗರಹೊಳೆ, ಬಂಡೀಪುರ ಮತ್ತು ಬಿಳಿಗಿರಿ ರಂಗನತಿಟ್ಟು (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಜನಸಂಖ್ಯೆಯ ಸ್ಥಿರತೆಯ ಕುರಿತು ಐದು ವರ್ಷಗಳ ಕಾಲ ಕ್ಷೇತ್ರ ಆಧಾರಿತ ಅಧ್ಯಯನವನ್ನು ಹರ್ಷಾ ನಡೆಸಿದ್ದಾರೆ.
ಮಾನವ-ಹುಲಿ ಸಂಘರ್ಷದ ಒಂದು ಅಧ್ಯಯನ ಎಂಬ ವಿಶೇಷ ಉಲ್ಲೇಖದ ಶೀರ್ಷಿಕೆಯ ಅವರ ಡಾಕ್ಟರೇಟ್ ಪ್ರಬಂಧವು ಈ ಸಂರಕ್ಷಿತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಕ್ಯಾಮೆರಾ ಟ್ರ್ಯಾಪಿಂಗ್ ಮತ್ತು ವಿವರವಾದ ಸಂಘರ್ಷ ತಾಣಗಳ ವಿಶ್ಲೇಷಣೆ ಸೇರಿದಂತೆ ತೀವ್ರವಾದ ಕ್ಷೇತ್ರಕಾರ್ಯವನ್ನು ಒಳಗೊಂಡಿದೆ.