ಗಂಗಾವತಿ ಪರಿಶಿಷ್ಟ ಜಾತಿಗಳ ಆಂತರಿಕ ಮೀಸಲಾತಿ ವಿರೋಧಿಸಿ ಹಾಗೂ ಬುದ್ಧ, ಅಂಬೇಡ್ಕರ್, SCSP/TSP ಹೋರಾಟದ ಮೂಲ ಆಶಯಗಳಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ಬಹುಜನ ಪ್ರತಿಭಟನಾ ಸಮಾವೇಶವನ್ನು ಮೇ 27ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮಾದಿಗ ದಂಡೋರ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಬಿ. ಹುಸೇನಪ್ಪ ಸ್ವಾಮಿ ಮಾದಿಗ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಅಖಿಲ ಭಾರತ ಮಾದಿಗ ದಂಡೋರ ಸಮಿತಿ ವತಿಯಿಂದ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಮೀಸಲಾತಿ ತಿದ್ದುಪಡೆ ಮಾಡುವಲ್ಲಿ ಕಾಂಗ್ರೆಸ್ ಸರಕಾರ ಸಂವಿಧಾನ ಉಲ್ಲಂಘನೆ ಮಾಡಲಾಗಿದೆ. ಸಂವಿಧಾನವನ್ನು ಗಾಳಿಗೆ ತೂರಿ, ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ. ದಲಿತ ಸಮಾಜ ಬೆಳೆಯಲು ಬಿಳದೆ ಕಾಂಗ್ರೆಸ್ ಪಕ್ಷ ನಮಗೆ ಅನ್ಯಾಯ ಮಾಡುತ್ತಿದೆ. ಅಹಂಕಾರದಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ. ಅದಕ್ಕಾಗಿಯೇ ಮೇ 27ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶವನ್ನು ನಡೆಸಲಾಗುವುದು. ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಟ ನಡೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಗಳು ಹಾಗೂ ಸರ್ಕಾರದ ಕ್ರಮಗಳು ಸಮಾಜದಲ್ಲಿ ಅಸಮಾಧಾನ ಮೂಡಿಸಿವೆ.
ಸಮಾವೇಶದಲ್ಲಿ ವಿವಿಧ ಸಮಾಜಮುಖಿ ಸಂಘಟನೆಗಳ ಮುಖಂಡರು, ಹೋರಾಟಗಾರರು ಹಾಗೂ ಬುದ್ಧಿಜೀವಿಗಳು ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ಒಳಮೀಸಲಾತಿ ನೀತಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಇದರಿಂದ ಪರಿಶಿಷ್ಟ ಜಾತಿಗಳ ಏಕತೆ ಹಾಳಾಗುವ ಸಾಧ್ಯತೆ ಇದೆ. ಅದನ್ನು ವಿರೋಧಿಸಿ, ಮೇ 27ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಭಾಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ರೀತಿ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.
ಅಖಿಲ ಭಾರತ ಮಾದಿಗ ದಂಡೋರ ಸಮಿತಿಯ ತಾಲೂಕು ಅಧ್ಯಕ್ಷ ಕನಕಪ್ಪ ದೊಡ್ಡಮನಿ, ಮುಖಂಡರಾದ ಯಮನೂರಪ್ಪ ಗೋನಾಳ, ಶರಣಪ್ಪ ಕನಕಗಿರಿ, ಯಂಕಪ್ಪ, ಬೋಜಪ್ಪ, ಶಿವಪ್ಪ ಮಾದಿಗ ಹಾಗೂ ಇತರಿದ್ದರು.
