ಮಾನ್ವಿ ಲೊಯೋಲ ಕಾಲೇಜಿನ ವಿಜ್ಞಾನ ವಿಭಾಗ ತೃತೀಯ ವರ್ಷದ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಪೋಸ್ಟರ್ ಪ್ರೆಸೆಂಟೇಶನ್ ಕಾರ್ಯಕ್ರಮವನ್ನು ಝೆವಿಯರ್ ಶಾಲೆಯ ಪ್ರಾಂಶುಪಾಲರಾದ ಫಾ. ವಿಲ್ಸನ್ ಬೆನ್ನಿಸ್ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಹಳೆಯ ಸಾಂಪ್ರದಾಯಿಕ ಹಾದಿಯಲ್ಲೇ ಸಾಗದೆ, ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಭಿನ್ನ ಹಾಗೂ ಸೃಜನಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಬೇಕು.
ಅವಕಾಶಗಳಿಗಾಗಿ ಕಾಯುತ್ತಾ ಕೈಕಟ್ಟಿ ಕೂರಬಾರದು; ಬದಲಿಗೆ ಸೃಜನಾತ್ಮಕವಾಗಿ ಸದಾ ಸನ್ನದ್ಧರಾಗಿದ್ದು, ಸಿಕ್ಕ ಸುವರ್ಣಾವಕಾಶಗಳನ್ನು ಉದಾತ್ತವಾಗಿ ಬಳಸಿಕೊಳ್ಳಬೇಕು ನಿಮ್ಮ ಗುರಿ ಮತ್ತು ಆಸಕ್ತಿ ಏನೆಂಬುದನ್ನು ಅರಿತು ಕೊಂಡು ಧೈರ್ಯದಿಂದ ಮುನ್ನಡೆಯಬೇಕು ಎಂದು ತಿಳಿಸಿದರು. ಲೊಯೋಲ ಕಾಲೇಜಿನ ಪ್ರಾಂಶುಪಾಲರಾದ ಫಾ. ವಿನೋದ್ ಪೌಲ್ ಮಾತನಾಡಿ ನಮ್ಮನ್ನು ನಾವು ನಿರಂತರವಾಗಿ ಮೌಲ್ಯಮಾಪನ ಮಾಡಿಕೊಳ್ಳುವ ಗುಣವನ್ನು ನಾವು ಹೊಂದಿದಾಗ ಮಾತ್ರ ನಮ್ಮನ್ನು ನಾವು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಬಿ.ಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿಗಳು ತಾವು ಇಂಟರ್ನ್ಶಿಪ್ ಅವಧಿಯಲ್ಲಿ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಪಡೆದ ಪ್ರಾಯೋಗಿಕ ಅನುಭವಗಳನ್ನು ಕಾರ್ಡ್ಬೋರ್ಡ್ಗಳ ಮೇಲೆ ಪೋಸ್ಟರ್ ರೂಪದಲ್ಲಿ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಸಹಾಯಕ ಮುಖ್ಯಸ್ಥರಾದ ಪ್ರಿಯಾಂಕ, ಪ್ರತಿಭಾ, ಚೈತ್ರ , ಸುಷ್ಮಾ , ಅಂಬಿಕಾ, ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. 26-ಮಾನ್ವಿ-1: ಮಾನ್ವಿ: ಲೊಯೋಲ ಕಾಲೇಜಿನ ವಿಜ್ಞಾನ ವಿಭಾಗ ತೃತೀಯ ವರ್ಷದ ವಿದ್ಯಾರ್ಥಿಗಳಿಂದ ಪೋಸ್ಟರ್ ಪ್ರೆಸೆಂಟೇಶನ್ ನಡೆಯಿತು.
