ಗಂಗಾವತಿ ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ವೆಂಕಟೇಶ್ ಕುರುಬರ ಬರ್ಬರ ಹತ್ಯೆ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು, ಆರು ಜನ ಅಪರಾಧಿಗಳಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿ ಐತಿಹಾಸಿಕ ಆದೇಶ ನೀಡಿದೆ.
ಗಂಗಾವತಿಯ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಕಳೆದ ಅಕ್ಟೋಬರ್ 7, 2025 ರಂದು ಹಳೇ ದ್ವೇಷದ ಹಿನ್ನೆಲೆಯಲ್ಲಿ ವೆಂಕಟೇಶ್ ಅವರನ್ನು ಗಂಗಾವತಿ ನಗರದಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ನಗರ ಪೊಲೀಸರು 927 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದ ರವಿ, ವಿಜಯ್ ಅಲಿಯಾಸ್ ಮೈಲಾರಿ, ಧನರಾಜ್, ಭೀಮ್ ಅಲಿಯಾಸ್ ಭರತ್, ಸಲೀಮ್ ಮಹಮ್ಮದ್ ರಫೀಕ್ ಮತ್ತು ಗಂಗಾಧರ ಗೌಳಿ ಎಂಬ ಆರು ಜನರನ್ನು ದೋಷಿಗಳೆಂದು ಪರಿಗಣಿಸಿ ಗಲ್ಲು ಶಿಕ್ಷೆ ಹಾಗೂ ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಕಾರ್ತಿಕ್, ದಾದಪೀರ್ ಸೇರಿದಂತೆ ಇತರ ಆರು ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಿರ್ದೋಷಿಗಳೆಂದು ಘೋಷಿಸಿ ನ್ಯಾಯಾಲಯವು ಖುಲಾಸೆಗೊಳಿಸಿದೆ.
